Skip to main content

Shree Rama Manasa Stotram

  || ಶ್ರೀ ರಾಮ ಮಾನಸ ಸ್ತೋತ್ರಮ್ ||

  ****************************

ಶ್ರೀಮನ್ನುಜ್ಜ್ವಲ-ಕೋಟಿಭಾನು-ಸದೃಶಂ ಮಂದಸ್ಮಿತಂ ಶಾಮಲಂ |

ಶ್ರೀ ಸೀತಾಸಹಿತಂ ವರಾ ಭಯಕರಂ ವಾಮೇ ಸುಮಿತ್ರಾಸುತಮ್ ||

ಶ್ರೀ ವತ್ಸಾಂಕ-ಧನು:ಶರಾದಿ-ಲಸಿತಂ ವಾತಾತ್ಮಜಾಭಿಷ್ಟುತಂ |

ಶ್ರೀರಾಮೇತಿ-ಪದದ್ವಯಾನ್ವಿತ ಮಹಂ ಧ್ಯಾಯೇ ಮನೋಮಂದಿರೇ ||೧||


ಭಾವಾರ್ಥ:-ಕೋಟಿಸೂರ್ಯರ ಸಮಾನವಾದ ಪ್ರಕಾಶಮಯ ತೇಜಸ್ಸನ್ನು ಹೊಂದಿ,ಮನೋಹರನೂ,ಮುಗುಳ್ನಗೆಯಿಂದ ಕೂಡಿದವನೂ,ಶ್ಯಾಮಲ ವರ್ಣದವನೂ, ಸೀತಾದೇವಿಯೊಡಗೂಡಿದವನೂ,ಅಗ್ರಗಣ್ಯನೂ,ಅಭಯಹಸ್ತವುಳ್ಳವನೂ,ಸುಮಿತ್ರಾತನಯ ಲಕ್ಷ್ಮಣನ ಒಡನಿರುವವನೂ,  ಎದೆಯ ಮೇಲೆ ಮಚ್ಚೆಯುಳ್ಳವನೂ,ಬಿಲ್ಲು ಬಾಣಗಳಿಂದ ಅಲಂಕೃತಗೊಂಡವನೂ,ಮಾರುತಿಯಿಂದ ಸ್ತುತಿಸಲ್ಪಡುವವನೂ,"ಶ್ರೀ" ಮತ್ತು ""ರಾಮ" ಎಂಬೀ ಎರಡು ಪದಗಳಿಂದ ಕೂಡಿರುವವನೂ ಆಗಿರುವ ಶ್ರೀ ರಾಮಚಂದ್ರನನ್ನು ನನ್ನ ಹೃದಯ ಮಂದಿರದಲ್ಲಿ ನೆಲೆಗೊಳಿಸಿ ಆರಾಧಿಸುತ್ತಿದ್ದೇನೆ.


ರಾಮೇತ್ಯೇಕರಸ-ಸ್ವರೂಪಮಮಲಂ ಲೀಲಾವತಾರಾವ್ಯಯಂ |

ರಾಜೇಂದ್ರಂ ರಘುನಂದನಂ,ರವಿಕುಲೋದ್ಭೂತಂ ಸಮಾವಾಹಯೇ ||

ರಾಜೇಷ್ಟಂ ರಮಣೀಯಮರ್ಪಿತಮಿದಂ ಮಾಣಿಕ್ಯ ಸಿಂಹಾಸನಂ |

ಪಾದ್ಯಂಸಾಚಮನೀಯಮರ್ಘ್ಯಮಮೃತಂ ರಾಮ ಸ್ವಯಂ ಸ್ವೀಕುರು ||೨||


ಭಾವಾರ್ಥ;_ರಾಮನೆನ್ನುವ ಸ್ವಚ್ಛವಾದ,ವಿನಾಶರಹಿತನಾದ,ಪರಬ್ರಹ್ಮನ ಏಕೈಕ ಸ್ವರೂಪಿಯಾದ,ಲೀಲಾವತಾರಿಯೂ,ರಾಜೇಂದ್ರನೂ,ರಘುನಂದನನೂ,ರವಿವಂಶದಲ್ಲಿ ಜನನವೆತ್ತವನೂ,ಆದ ಶ್ರೀರಾಮಚಂದ್ರನೇ!ನಿನ್ನನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವೆ.ಸ್ವಾಮಿಯೇ ಅರಸುಕುಲಪ್ರಿಯನಾದ ನಿನಗೆ ಆಹ್ಲಾದಕರವಾಗಿರುವ ಮಾಣಿಕ್ಯ ಸಿಂಹಾಸನಕ್ಕೆ ಸಮವಾದ ನನ್ನ ಹೃದಯವನ್ನು ಸುಖಾಸನವಾಗಿ ಅರ್ಪಿಸುತ್ತಲ್ಲಿರುವೆ.ಶ್ರೀರಾಮಚಂದ್ರನೇ,ಪಾದಗಳನ್ನು ಶುಚಿಯಾಗಿಸಿಕೊಳ್ಳಲು ಮತ್ತು ಆಚಮನಾರ್ಥವಾಗಿ ಅರ್ಪಿಸುತ್ತಿರುವ ಈ ಶುದ್ಧೋದಕವನ್ನು ಸ್ವೀಕರಿಸು.


ಮಧ್ವಕ್ತಂ ಮಧುಪರ್ಕಮಂತ್ರಪಠಿತಂ ಪಂಚಾಮೃತಂ ಕಲ್ಪಿತಂ |

ಮಂದಾಕಿನ್ಯಾಮಿದಂ ಸುರತ್ನಕಲಶೈ: ಸ್ನಾನಾರ್ಥಮಪ್ಯಾಹೃತಮ್ |

ಮಂದಾರಾಮರ-ಪಾರಿಜಾತ-ತಲಗೇ ಸೌವರ್ಣ ಪೀಠೇ ಸ್ಥಿತಂ |

ಮಂತ್ರೈಸ್ತ್ವಾಮಿಷೇಚಯಾಮಿ ವಿವಿಧೈ:ಸೂಕ್ತೈ: ಸು ತೀರ್ಥೋದಕೈ:  ||೩||


ಭಾವಾರ್ಥ:-ಸ್ವಾಮಿ ಶ್ರೀರಾಮಚಂದ್ರನೇ! ನಿನ್ನ ಪ್ರೀತ್ಯರ್ಥವಾಗಿ ಮಧುಪರ್ಕ ಮಂತ್ರ ಪಠಿಸುತ್ತಾ ಜೇನು ಮಿಶ್ರಿತ ಪಂಚಾಮೃತವನ್ನು ವ್ಯವಸ್ಥೆಗೊಳಿಸಿರುವೆನು.ನಿನ್ನ ಸ್ನಾನಾರ್ಥವಾಗಿ ಪವಿತ್ರವಾದ ಗಂಗಾಜಲವನ್ನು ಶ್ರೇಷ್ಠವಾಗಿರುವ ರತ್ನಗಳಿಂದ ಅಲಂಕರಿಸಲ್ಪಟ್ಟ ಕಲಶಗಳಲ್ಲಿ ತಂದಿರಿಸಿರುವೆನು.ಮಂದಾರ ಪಾರಿಜಾತ,ಕಲ್ಪತರು  ಮೊದಲಾದ ದೇವ ವೃಕ್ಷಗಳ ಅಡಿಯಲ್ಲಿ ಇರಿಸಿರುವ ಬಂಗಾರದ ಪೀಠದಲ್ಲಿ ನಿನ್ನನ್ನು ಕುಳ್ಳಿರಿಸಿ ನಾನಾ ವಿಧದ ಸೂಕ್ತ ಮಂತ್ರಾದಿಗಳಿಂದ,ಶ್ರೇಷ್ಠವಾಗಿರುವ ತೀರ್ಥಗಳಿಂದ ನಿನ್ನ ಅಭಿಷೇಕವನ್ನು ಮಾಡುವೆನು ಸ್ವಾಮಿಯೇ.ಕೃಪೆಯುಳ್ಳವನಾಗಿ ಸ್ವೀಕರಿಸು.


ಜಲಧರ-ನಿಭಗಾತ್ರೇ ಸ್ವರ್ಣಯಜ್ಞೋಪವೀತಂ |

ನವಗುಣ-ಗಣಿತಂ ತತ್ ಪಾವನಂ ಪಾವನಾನಾಮ್ ||

ತಡಿದಿವ ಖಲುಪೀತಂ ವಸ್ತ್ರಮಚ್ಛೋತ್ತರೀಯಂ |

ಜಯ ರಘುವರ ದಾಸ್ಯೇ ತ್ವಂ ಗೃಹಾಣ ಸ್ವಮೇವ ||೪||


ಭಾವಾರ್ಥ:-ಬಂಗಾರದ ಮೂರೆಳೆಗಳುಳ್ಳ ಯಜ್ಞೋಪವೀತವನ್ನು ಜಲಾವೃತವಾಗಿರುವ ಮುಗಿಲನ್ನು ಹೋಲುವ ಶ್ಯಾಮಲ ವರ್ಣದವನಾದ ನಿನ್ನ ಕೊರಳಿಗೆ ಅರ್ಪಿಸುತ್ತಿರುವೆನು.ಮಿಂಚಿನಂತೆ ಪ್ರಕಾಶಮಯವಾದ ಹಳದಿಯ ವಸ್ತ್ರವನ್ನು ನಿನ್ನ ಉತ್ತರೀಯಕ್ಕಾಗಿ ಸಮರ್ಪಿಸುತ್ತಿರುವೆನು.ಇವೆಲ್ಲವುಗಳನ್ನು ಸ್ವೀಕರಿಸು ಸ್ವಾಮಿಯೇ!  ಅಗ್ರಗಣ್ಯ ಶ್ರೀ ರಾಮಚಂದ್ರನೇ ನಿನಗೆ ಜಯವಾಗಲಿ.


ಕಿರೀಟ-ಹಾರಾಂಗದ-ಚಾರು-ಮೇಖಲಾ |

ಮುದ್ರಾದ್ಯನೇಕಾಕೃತಿ-ಭೂಷಣಾನಿ ||

ಮಹೀ-ಸುಗಂಧಂ ಪ್ರಗೃಹಾಣ ಚಾಕ್ಷತಾನ್ |

ಪುಷ್ಪೇಷು ಖಂ ರಾಮ ಮಯಾ ಸಮರ್ಪಿತಮ್ ||೫||


ಭಾವಾರ್ಥ:-ಕಿರೀಟ.ಮಾಲೆ,ಭುಜದ ಆಭರಣ,ಸುಂದರವಾಗಿರುವ ಸೊಂಟದ ಪಟ್ಟಿ,ಮನೋಹರವಾಗಿರುವ ಉಂಗುರಗಳು,ಸುಗಂಧಾಕ್ಷತೆ,ಮತ್ತು ಆಗಸ ವರ್ಣದ ಪುಷ್ಪಗಳನ್ನು ಅರ್ಪಿಸುತ್ತಿರುವೆನು.ಸ್ವೀಕರಿಸು ಸ್ವಾಮಿಯೇ!


ರಾಷ್ಟ್ರೋಪಪ್ಲವನಾಶಕಂ ಸುಲಲಿತಂ ವಾಯುಂ ಸುಧೂಪಂ ತಥಾ |

ರಾಮೇಮಂ ಪರಮಂ ದಿವಾಕರ ಮಹೋತೇಜೋಮಯಿ ದೀಪಿಕಾಂ ||

ರಾಜೀವಾರುಣಲೋಚನಾಮೃತಮಯಂ ಷಟ್ ಸ್ವಾದುಲೋಲೈರಸೈ: |

ಸಂಪನ್ನಂ ವಿನಿವೇದಿತಂ ಸುಮನಸಾ ನೈವೇದ್ಯಮಂಗೀಕುರು ||೬||


ಭಾವಾಥ:-ನಾಡಿಗೆ ಬೇಗೆಯನ್ನು ಕೊಡುವ ಕೆಟ್ಟ ವಾತಾವರಣವನ್ನು ಹೋಗಲಾಡಿಸಬಲ್ಲ ಉತ್ತಮ ಧೂಪವನ್ನೂ ಮನಮೋಹಕವಾದಂತಹಾ, ಸೂರ್ಯನಂತೆ ಪರಮ ತೇಜೋಮಯವಾಗಿರುವ ದೀಪವನ್ನೂ ಶ್ರೀರಾಮಚಂದ್ರನೇ ನಿನಗರ್ಪಿಸುತ್ತಿರುವೆನು.ಕಮಲವನ್ನು ಹೋಲುವ ನಯನಗಳುಳ್ಳ ರಾಜೀವ ಲೋಚನನೇ,ಶ್ರದ್ಧಾಭಕ್ತಿಗಳಿಂದ  ಷಡ್ರಸಭರಿತ ಪಕ್ವಾನ್ನಗಳನ್ನು ನೈವೇದ್ಯರೂಪದಲ್ಲಿ ಅರ್ಪಿಸುತ್ತಿರುವೆನು ಸ್ವಾಮಿಯೇ; ಸ್ವೀಕರಿಸಿ ತೃಪ್ತನಾಗು.


ಮಧ್ಯೇ ಪಾನಮಿದಂ ಸುಶೀತಲ ಜಲಂ ವಾನೀರಗಂಧಾಭೃತಂ |

ರಾಮ ಸ್ವೀಕುರು ಮತ್ಸಮರ್ಪಿತಮಿದಂ ಹಸ್ತೋದಕಂ ನಿರ್ಮಲಮ್ ||

ತಾಂಬೂಲಂ ಸಫಲಂ ತ್ರಯೋದಶಗುಣಂ ಸ್ವಾತ್ಮೈಕರಾಗಾನ್ವಿತಂ |

ಶ್ರದ್ಧಾರತ್ನ-ಸುವರ್ಣಪುಷ್ಪಸಹಿತಾಂ ಗೃಹ್ಣಾತು ತಾಂ ದಕ್ಷಿಣಾಮ್ ||೭||


ಭಾವಾರ್ಥ:-ಸ್ವಾಮಿ ಶ್ರೀರಾಮಚಂದ್ರನೇ!ಉತ್ತಮ ಪರಿಮಳ ಭರಿತ ಬೇರಿನ ಚೆನ್ನಾಗಿ ತಂಪಾದ ಜಲವನ್ನು ಭೋಜನ ಸ್ವೀಕಾರದ ಮಧ್ಯದಲ್ಲಿ ಸ್ವೀಕರಿಸುವವನಾಗು.ಹಸ್ತವನ್ನು ತೊಳೆಯುವುದರ ಮೂಲಕವಾಗಿ ಶುದ್ಧೀಕರಿಸಲು ಸ್ವಚ್ಛವಾಗಿರುವ ನೀರಿಲ್ಲಿದೆ.ಆತ್ಮ ಸ್ವರೂಪದ, ಹದಿಮೂರು ಗುಣಗಳುಳ್ಳ ತಾಂಬೂಲವಿದೋ ಇಲ್ಲಿರಿಸಿರುವೆ.ದಕ್ಷಿಣಾರ್ಥವಾಗಿ ಇದೋ ಸುವರ್ಣ ಪುಷ್ಪಗಳನ್ನು ಸಮರ್ಪಿಸುತ್ತಲಿರುವೆನು. ಇವೆಲವುಗಳನ್ನು ಮಂಗಲದಾಯಕನೇ; ಸ್ವೀಕರಿಸು.


ಜಯಜಯತಿ ವಿಷ್ಣೂ ರಾಮನಾಮಾಭಿಧೇಯೋ |

ಜಯತಿ ಜಯತಿ ಪೂರ್ಣ: ಕೋಟಿಕಂದರ್ಪಭಾಸ: ||

ಜಯತಿ ಜಯತಿ ವಾದ್ಯೈರ್ನಾಟಕೈರ್ಗೀತ ನೃತ್ಯೈ- |

ರ್ಜಯ ಜಯ ತಿಮಿರಾರೇ ಗೃಹ್ಣ ನೀರಾಜನಂ ತ್ವಮ್ ||೮||


ಭಾವಾರ್ಥ:-ಶ್ರೀರಾಮನೆಂಬ ಹೆಸರಿನ ಶ್ರೀ ಮಹಾವಿಷ್ಣುವಿಗೆ ಜಯವಾಗಲಿ.ಕೋಟಿ ಮನ್ಮಥರ ತೇಜಸ್ಸನ್ನು ಹೊಂದಿರುವನೇ,ಪರಿಪೂರ್ಣನೇ;ನಿನಗೆ ಜಯವಾಗಲಿ.ನಾನಾ ವಿಧದ ಸಂಗೀತ-ವಾದ್ಯ-ನಾಟಕ-ನೃತ್ಯಗಳ ಮೂಲಕವಾಗಿ ನಿನ್ನ ಸೇವೆ ಗೈಯುತ್ತಿರುವೆ ಸ್ವಾಮಿಯೇ! ನಿನಗೆ ಜಯವಾಗಲಿ.ನನ್ನ ಅಜ್ಞಾನವೆಂಬ ಅಂಧಕಾರವನ್ನು ಕಳೆಯುವವನೇ,ಮಂಗಲಮಯವಾಗಿರುವ ನೀರಾಜನವನ್ನಿದೋ ಸ್ವೀಕರಿಸು.ನಿನಗಿದೋ ಜಯ ಜಯವೆನ್ನುವೆ.


ಸಾಮ್ರಾಜ್ಯ ಭೋಜ್ಯಾದಿ-ಸುಪಾರಮೇಷ್ಠ್ಯಾಂ |

ತಮತ್ರ ಯಜ್ಜಾಖಿಲ ವಸ್ತು ಜಾತಮ್ ||

ಏಕಾಕ್ಷರಂ ಬ್ರಹ್ಮಮಯಂ ಪ್ರಸಿದ್ಧ |

ಮೇವಾರ್ಪಯಾಮೀತಿ ಸುಮಂತ್ರ ಪುಷ್ಪಮ್ ||೯||


ಭಾವಾರ್ಥ:-ಅಖಂಡ ಸಾಮ್ರಾಜ್ಯ-ಭೋಗಭಾಗ್ಯಾದಿಗಳಿಂದ ಪರಮೇಷ್ಠಿಯವರೆಗೆ ನಿರ್ಮಿತವಾಗಿರುವ ವಸ್ತುಗಳೆಲ್ಲವೂ ಓಂಕಾರವೆಂಬ ಪದವಾಚ್ಯ ಸ್ವರೂಪವಾಗಿರುವ ಪರಬ್ರಹ್ಮನ ರೂಪಗಳೇ ಆಗಿದ್ದು ಅವೆಲ್ಲವುಗಳನ್ನು ಪರಮೋತ್ಕೃಷ್ಟವಾಗಿರುವ ಮಂತ್ರಗಳ ಮುಖೇನ ಪುಷ್ಪಾಂಜಲಿ ಎಂಬುದಾಗಿ ನಿನಗರ್ಪಿಸುತ್ತಿರುವೆನು ಪ್ರಭುವೇ! ಕರುಣಾಸಾಗರ ಶ್ರೀರಾಮಚಂದ್ರನೇ ಸ್ವೀಕರಿಸುವವನಾಗು ಪ್ರಭುವೇ!


ಜಯ ಜಯ ಕರುಣಾಬ್ದೇsನಂತ ಭಾನುಪ್ರಕಾಶ |

ಜಯ ಜಯ ಜಗದೀಶಾವ್ಯಕ್ತ ಮಾಯಾಧಿದೇವ ||

ಜಯ ಜಯ ಧರಣೀಜಾವಲ್ಲಭಾನಂತವೀರ್ಯ |

ಜಯ ಜಯ ರಘುನಾಥ್ಹಾನಾಥನಾಥ ಪ್ರಸೀದ ||೧೦||


ಭಾವಾರ್ಥ:-ಕರುಣಾಸಾಗರನೇ,ಅನಂತಾನಂತ ಸೂರ್ಯಪ್ರಕಾಶನೇ,ನಿನಗೆ ಜಯವಾಗಲಿ.ಹೇ!ಜಗದೊಡೆಯನೇ,ಅಸ್ಪಷ್ಟವಾಗಿರುವ ವಿಶಿಷ್ಟ ಶಕ್ತಿಗಳ ಅಧಿಪತಿಯೇ,ನಿನಗೆ ಜಯವಾಗಲಿ. ಭೂಮಾತೆಯ ತನಯೆ ಜಾನಕೀದೇವಿಯ ಪತಿಯೇ,ಅಪರಿಮಿತ ಪರಾಕ್ರಮಿಯೇ,ನಿನಗೆ ಜಯವಾಗಲಿ.ಅನಾಥರೊಡೆಯಾ, ರಘುನಾಥನೇ ಪ್ರಸನ್ನನಾಗು ಪ್ರಭುವೇ.ನಿನಗೆ ಜಯವಾಗಲಿ.


ಯಜ್ಞೇಶ ಯಜ್ಞಾಧಿಪ ಯಜ್ಞಪಾಲ |

ಯಶ: ಪ್ರಧಾಧೋಕ್ಷಜ ರಾಮಚಂದ್ರ ||

ಪ್ರದಕ್ಷಿಣಾಂ ತೇ ಪ್ರಕರೋಮಿ ನಿತ್ಯಂ |

ಪದೇ ಪದೇನಂತ ಮುಖಾದಿ ದಾತ್ರಿಮ್ ||೧೧||


ಭಾವಾರ್ಥ:-ಯಜ್ಞೇಶನೇ,ಯಜ್ಞರಕ್ಷಕನೇ,ಯಜ್ಞಗಳೊಡೆಯನೇ,ಅತೀಂದ್ರಿಯ ಜ್ಞಾನಿಯೇ, ಶ್ರೀರಾಮಚಂದ್ರನೇ, ಯಶ:ಕರನೇ,ಅನುದಿನವೂ ನಿನಗೆ ಪ್ರದಕ್ಷಿಣೆ ಬರುತ್ತಿರುವೆನು. ಆ ರೀತಿ ಬರುವ ಪ್ರದಕ್ಷಿಣೆಗಳು ಪ್ರತಿ ಹೆಜ್ಜೆಹೆಜ್ಜೆಗೂ ಅನಂತ ಯಜ್ಞಾದಿಗಳ ಫಲವನ್ನು ಒದಗಿಸಿಕೊಡುತ್ತವೆ.


ರಾಜಾಧಿರಾಜಾಯ ರಮಾವರಾಯ |

ರಾತ್ರಿಂಚರಾಣಾಮಭಿ ಸಂಹರಾಯ ||

ರಾಜ್ಯಾಭಿಷಿಕ್ತಾಯ ರಘೂತ್ತಮಾಯ |

ಶ್ಯಾಮಾಯ ರಾಮಾಯ ನಮೋ ನಮಸ್ತೇ ||೧೨||


ಭಾವಾರ್ಥ:-ರಾಜಾಧಿರಾಜನಿಗೆ,ರಮಾಕಾಂತನಿಗೆ,ದಾನವ ಸಂಹಾರಕಗೆ,ರಾಜ್ಯಾಭಿಷಿಕ್ತಗೆ, ರಘುಕುಲಾಗ್ರಗಣ್ಯಗೆ,ಶ್ಯಾಮಲವರ್ಣಗೆ,ಸ್ವಾಮಿ ಶ್ರೀರಾಮಚಂದ್ರನಿಗೆ ಪುನ:ಪುನ:ನಮಸ್ಕರಿಸುವೆನು.


ಪ್ರಭೋ ಚಾಮರಾದರ್ಶ ಛತ್ರಾದಿಕಾನ್ವೈ |

ಮಹಾರಾಜ ರಾಜೋಪಚಾರಾನ್ ಗೃಹಾಣ ||

ಸುಹೃತ್ಪದ್ಮಪೀಠಂ ಮುರಾರೇ ಪ್ರವಿಶ್ಯ |

ಮಮೇಶಾಪರಾಧಾನ್ ಹಿ ಸರ್ವಾನ್ ಕ್ಷಮಸ್ವ ||೧೩||


ಭಾವಾರ್ಥ:-ದೊರೆಯೇ!ಮಹಾರಾಜನೇ,ಚಾಮರ,ಛತ್ರ,ಕನ್ನಡಿ ಇತ್ಯಾದಿಯಾದ ರಾಜೋಪಚಾರಗಳನ್ನು ಸ್ವೀಕರಿಸುವವನಾಗು.ಮುರಾರಿಯೇ!ಸ್ವಾಮೀ;ನನ್ನ ಹೃತ್ಕಮಲ ಪೀಠದ ಮೇಲೆ ಆಶ್ರಯವನ್ನು ಹೊಂದುವವನಾಗು .ತನ್ಮೂಲಕ ನನ್ನ ಸರ್ವಾಪರಾಧಗಳನ್ನು ಕ್ಷಮಿಸಿ ಉದ್ಧರಿಸು.


ಇತ್ಯೇವ ಸಾಂಗಮುಪಚಾರ ಯುಕ್ತಾಂ |

ಶ್ರೀ ರಾಮಪೂಜಾಂ ಹೃದಯೇ ಬಹಿರ್ವಾ ||

ಕುರ್ವಂತಿ ಯೇ ಧರ್ಮಮಥಾರ್ಥಕಾಮಾನ್ |

ಮೋಕ್ಷಾದಿಕಾಂ ಸಂಪದ ಮಾಪ್ನುವಂತಿ ||೧೪||


ಭಾವಾರ್ಥ:-ಯಾರು ಈ ರೀತಿಯಾಗಿ ಶ್ರೀರಾಮಚಂದ್ರ ಪ್ರಭುವಿನ ಆರಾಧನೆಯನ್ನು ಮಾನಸೋಪಚಾರಗಳಿಂದಾಗಲೀ ಬಾಹ್ಯೋಪಚಾರಗಳಿಂದಾಗಲೀ ಸಂಪೂರ್ಣವಾಗಿ ಮಾಡುವರೋ ಅಂತಹವರಿಗೆ ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಸಂಪದಗಳು ಲಭಿಸುವವು.


ಶ್ರೀ ವರ್ಣಪೂರ್ವಂ ಸಕಲಾರ್ಥದಂ ವೈ |

ರಾಮೇತಿವರ್ಣದ್ವಯಮೇವ ಪೂರ್ವಮ್ ||

ಜಯೇತಿ ರಾಮೇತಿ ಜಯದ್ವಯೇತಿ |

ರಾಮೇತಿ ಜಪ್ತ್ವಾತು ಪುನರ್ನಜನ್ಮ ||೧೫||


ಭಾವಾರ್ಥ:-"ರಾಮ"ಎಂಬ ದ್ವಯಾಕ್ಷರಕ್ಕೆ ಮೊದಲು "ಶ್ರೀ" ಎಂಬ ಸಕಲ ಇಷ್ಟಾರ್ಥಗಳನ್ನು ಕರುಣಿಸುವ ಅಕ್ಷರವನ್ನು ಜೋಡಿಸಬೇಕು.ಆ ಮೇಲೆ "ಜಯ" ಎಂಬ ಪದವನ್ನು ಕೂಡಿಸಿ ನಂತರ "ರಾಮ"ಎಂಬ ಶಬ್ದವನ್ನು ಯೋಜಿಸಿ ಮತ್ತೆ ಅವುಗಳ ಮುಂದೆ "ಜಯ ಜಯ ರಾಮ"ಎನ್ನುವ ಶಬ್ದಗಳನ್ನು ಹೊಂದಿಸಬೇಕು.ಆಗ "ಶ್ರೀರಾಮ ಜಯರಾಮ ಜಯ ಜಯ ರಾಮ" ಎಂಬ ತ್ರಯೋದಶಾಕ್ಷರೀ ಶ್ರೀರಾಮ ಮಹಾ ಮಂತ್ರವು ಲಭಿಸುತ್ತದೆ.ಈ ಮಹಾ ಮಂತ್ರಾನುಷ್ಠಾನ ಮಾಡುವವರಿಗೆ ಪುನರ್ಜನ್ಮವಿಲ್ಲದೆ ಶಾಶ್ವತವಾದ ಮುಕ್ತಿಯು ದೊರಕುವುದು.

Comments