ವಿಷ್ಣು ಸಹಸ್ರನಾಮಕ್ಕೆ ಪರಿಚಯವೇ ಬೇಕಿಲ್ಲ. ಮಹಾಭಾರತದ ಅನುಶಾಸನ ಪರ್ವದಲ್ಲಿ ಬರುವ ಈ ಮಹಾನ್ ಸ್ತೋತ್ರವನ್ನು ವೇದವ್ಯಾಸ ಮಹರ್ಷಿಗಳು ನಮಗೆ ಭೀಷ್ಮ-ಯುಧಿಷ್ಟಿರರ ಸಂವಾದದ ಮೂಲಕ ನೀಡಿದ್ದಾರೆ. ಈ ಪ್ರಸಂಗವನ್ನು ವೈಶಂಪಾಯನರು ಜನಮೇಜಯನಿಗೆ ವಿವಿರಿಸುತ್ತಿರುವುದಾಗಿ ವ್ಯಾಸರು ತಿಳಿಸಿರುತ್ತಾರೆ.
ಈ ವಿಷ್ಣುಸಹಸ್ರನಾಮವನ್ನು “ಸ್ತೋತ್ರ” ಎಂದೂ, “ಮಂತ್ರ” ಎಂದೂ ಕರೆಯುತ್ತಾರೆ. ಏಕೆಂದರೆ ಇದು ಕೇವಲ ಹೊಗಳಿಕೆಯ ಕಾವ್ಯವಲ್ಲ; ಮಂತ್ರಸ್ವರೂಪವಾದ ದಿವ್ಯ ನಾಮಸಂಕೀರ್ತನೆ.
ಈ ಸ್ತೋತ್ರದಲ್ಲಿ ಸುಮಾರು 107 ಶ್ಲೋಕಗಳಿದ್ದು, ಅವುಗಳಲ್ಲಿ ಸಹಸ್ರ, ಅಂದರೆ ಸಾವಿರ, ನಾಮಗಳು ಬರುತ್ತವೆ. ಆದರೆ ಇಲ್ಲಿ “ಸಾವಿರ” ಎಂದರೆ ಕೇವಲ ಲೆಕ್ಕಕ್ಕೆ ಸಾವಿರವೆಂದು ಅರ್ಥಮಾಡಿಕೊಳ್ಳಬಾರದು; ಅನಂತ ಗುಣ, ಅನಂತ ರೂಪ, ಅನಂತ ಮಹಿಮೆಗಳ ಸೂಚಕವಾಗಿ “ಸಹಸ್ರ” ಎಂಬ ಪದ ಬಂದಿದೆ. ಶ್ರೀ ವಿಷ್ಣುವಿನ ಅನೇಕ ರೂಪಗಳು, ಗುಣಗಳು, ಕಾರ್ಯಗಳು, ಕರುಣೆ, ಶಕ್ತಿ, ಇವೆಲ್ಲವನ್ನೂ ಒಳಗೊಂಡ ಅದ್ಭುತ ದಿವ್ಯ ಕೃತಿ ಇದಾಗಿದೆ. ಆದ್ದರಿಂದ ಇದನ್ನು "ಸಾವಿರಾರು" ಎಂದೇ ತಿಳಿಯಬೇಕು
ಧರ್ಮರಾಜ ಕೇಳುತ್ತಾನೆ: “ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ?” ಎಲ್ಲ ಧರ್ಮಗಳಲ್ಲಿಯೂ ಶ್ರೇಷ್ಠವಾದ ಧರ್ಮ ಯಾವುದು?
ಅದಕ್ಕೆ ಭೀಷ್ಮರು ಉತ್ತರಿಸುತ್ತಾ: “ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಂ । ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ ॥” - ಈ ಜಗತ್ತಿನ ಪ್ರಭುವಾದ, ದೇವತೆಗಳಿಗೂ ದೇವನಾದ, ಅನಂತನಾದ, ಪುರುಷೋತ್ತಮನಾದ ಶ್ರೀಮನ್ನಾರಾಯಣನನ್ನು ಸಹಸ್ರನಾಮಗಳಿಂದ ಸ್ತುತಿಸುವುದೇ ಮಹಾಧರ್ಮ ಎಂದು ಅವರು ಹೇಳುತ್ತಾರೆ.
ಮುಂದೆ: “ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಂ ।ಧ್ಯಾಯನ್ ಸ್ತುವನ್ ನಮಸ್ಯಂಶ್ಚ ಯಜಮಾನಸ್ತಮೇವ ಚ ॥” - ಅವನನ್ನೇ ನಿತ್ಯವೂ ಭಕ್ತಿಯಿಂದ ಆರಾಧಿಸುವುದು, ಧ್ಯಾನಿಸುವುದು, ಸ್ತುತಿಸುವುದು, ನಮಸ್ಕರಿಸುವುದು. ಇದೇ ಶ್ರೇಷ್ಠ ಮಾರ್ಗ. ಹೀಗಾಗಿ ಭೀಷ್ಮರ ನಿರ್ಣಯ ಸ್ಪಷ್ಟ: “ಏಷ ಮೇ ಸರ್ವಧರ್ಮಾಣಾಂ ಧರ್ಮೋऽಧಿಕತಮೋ ಮತಃ” -- “ಎಲ್ಲ ಧರ್ಮಗಳಲ್ಲಿಯೂ ಇದುವೇ ಶ್ರೇಷ್ಠ ಧರ್ಮ” ಎಂದು.
ಅಂದರೆ ಶ್ರೀ ಕೃಷ್ಣನ, ಶ್ರೀಮಹಾವಿಷ್ಣುವಿನ ದಿವ್ಯನಾಮಗಳನ್ನು ಸ್ಮರಿಸುವುದು, ಪಠಿಸುವುದು, ಭಜಿಸುವುದು. ಇದಕ್ಕಿಂತ ಮೇಲಿನ ಧರ್ಮವೇ ಇಲ್ಲ ಎಂದು ಭೀಷ್ಮರು ಉಪದೇಶಿಸುತ್ತಾರೆ.
ವಿಷ್ಣು ಸಹಸ್ರನಾಮ ಮಂಗಳಾಚರಣೆ
शुक्लाम्बरधरं विष्णुं शशिवर्णं चतुर्भुजम् ।
प्रसन्नवदनं ध्यायेत् सर्वविघ्नोपशान्तये ॥
ಬಿಳಿ ವಸ್ತ್ರ ಧರಿಸಿದ, ಚಂದ್ರನಂತೆ ಪ್ರಕಾಶಮಾನನಾದ, ನಾಲ್ಕು ಭುಜಗಳನ್ನು ಹೊಂದಿದ, ಸದಾ ಪ್ರಸನ್ನಮುಖನಾದ ವಿಷ್ಣುವನ್ನು ಎಲ್ಲಾ ವಿಘ್ನಗಳು ಶಾಂತಿಯಾಗಲೆಂದು ಧ್ಯಾನಿಸಬೇಕು.
“ಶುಕ್ಲ” ಎಂದರೆ “ಬಿಳಿ”ಯೆಂದಾದರೂ, ಅದು ಸತ್ವಗುಣ ಸಂಕೇತ. ಭಗವಂತನ ವಸ್ತ್ರ ಆಕಾಶವೇ ಸರಿ. ಸರ್ವವ್ಯಪಿಯಾದ ಭಗವಂತನಿಗೆ ನಿಗದಿತ ವಸ್ತ್ರವಿರಲು ಸಾಧ್ಯವೇ? ನೆನದವರ ತಾಪವನ್ನು ತೆಗೆದು ತಂಪನ್ನು ಈಯುವ ಆ ಭಗವಂತನ ವರ್ಣ "ಶಶಿವರ್ಣ". ಎಲ್ಲಾ ದಿಕ್ಕಿನಲ್ಲೂ ಹರಡಿರುವ ಅವನು ಚತುರ್ಭುಜನು. ಸದಾ ಆನಂದಮಯನಾದ ಅವನು ಪ್ರಸನ್ನವದನನು, ಏಕೆಂದರೆ ಅವನಿಗೆ “ಬೇಕು” ಎಂಬುದೇ ಇಲ್ಲ. ಅವನ ಧ್ಯಾನ ಮಾತ್ರದಿಂದ ನಮಗೂ ಆ ಗುಣಗಳ ಒಂದು ಲವಮಾತ್ರವಾದರೂ ದಕ್ಕೀತೇನೊ.
⸻
व्यासं वसिष्ठनप्तारं शक्तेः पौत्रमकल्मषम् ।
पराशरात्मजं वन्दे शुकतातं तपोनिधिम् ॥
ವಶಿಷ್ಠನ ಮೊಮ್ಮಗನಾದ, ಶಕ್ತಿ ಮಹರ್ಷಿಯ ಮರಿಮೊಮ್ಮಗನಾದ, ಪರಾಶರರ ಪುತ್ರನಾದ, ಪಾಪರಹಿತನಾದ, ಮಹಾತಪಸ್ವಿಯಾದ, ಹಾಗೂ ಶುಕನ ತಂದೆಯಾದ ವ್ಯಾಸ ಮಹರ್ಷಿಗಳಿಗೆ ನಮಸ್ಕಾರ!
⸻
व्यासाय विष्णुरूपाय व्यासरूपाय विष्णवे ।
नमो वै ब्रह्मनिधये वासिष्ठाय नमो नमः ॥
ವ್ಯಾಸರು ವಿಷ್ಣುವಿನ ರೂಪವೇ ಆಗಿದ್ದಾರೆ; ವಿಷ್ಣುವೇ ವ್ಯಾಸರ ರೂಪದಲ್ಲಿ ವ್ಯಕ್ತರಾಗಿದ್ದಾರೆ.
ವೇದಜ್ಞಾನದ ಭಂಡಾವು ಆ ವಾಸಿಷ್ಠ-ಕುಲೋದ್ಭವರಾದ ವ್ಯಾಸಮುನಿಗಳಿಗೆ ಪುನಃ ಪುನಃ ನಮಸ್ಕಾರ.
⸻
अविकाराय शुद्धाय नित्याय परमात्मने ।
सदैकरूपरूपाय विष्णवे सर्वजिष्णवे ॥
ಯಾವ ಬದಲಾವಣೆಗಳಿಗೂ ಒಳಪಡುವದಿಲ್ಲದ, ಶುದ್ಧಸ್ವರೂಪನಾದ, ನಿತ್ಯನಾದ, ಪರಮಾತ್ಮನಾದ, ಸದಾ ಒಂದೇ ದಿವ್ಯಸ್ವರೂಪದಲ್ಲಿರುವ, ಸರ್ವವಿಜಯಿಯಾದ ಶ್ರೀವಿಷ್ಣುವಿಗೆ ನಮಸ್ಕಾರ.
⸻
यस्य स्मरणमात्रेण जन्मसंसारबन्धनात् ।
विमुच्यते नमस्तस्मै विष्णवे प्रभविष्णवे ॥
ಯಾರ ಸ್ಮರಣೆ ಮಾತ್ರದಿಂದಲೇ ಜೀವಿ ಜನನ–ಮರಣರೂಪ ಸಂಸಾರಬಂಧನದಿಂದ ಮುಕ್ತನಾಗುತ್ತಾನೋ, ಆ ಪ್ರಭುವಾದ ವಿಷ್ಣುವಿಗೆ ನಮಸ್ಕಾರ.
⸻
ॐ नमो विष्णवे प्रभविष्णवे ॥
ಓಂ — ಸರ್ವವ್ಯಾಪಿಯಾದ, ಸೃಷ್ಟಿಗೆ ಕಾರಣನಾದ, ಎಲ್ಲದಲ್ಲಿಯೂ ಪ್ರವೇಶಿಸಿರುವ ಶ್ರೀವಿಷ್ಣುವಿಗೆ ನಮಸ್ಕಾರ.
ಈ ಆರಂಭದ ಶ್ಲೋಕಗಳು ಕೇವಲ ಮಂಗಳಾಚರಣೆಯಲ್ಲ; ಅವು ಸಂಪೂರ್ಣ ವಿಷ್ಣು ಸಹಸ್ರನಾಮದ ಮನೋಭಾವವನ್ನು ಸ್ಥಾಪಿಸುತ್ತವೆ — ಧ್ಯಾನ, ಪರಮಾತ್ಮತತ್ತ್ವ, ಮತ್ತು ನಾಮಸ್ಮರಣೆಯ ಮಹಿಮೆ.
ಯುಧಿಷ್ಠಿರನ ಪ್ರಶ್ನೆ
ಶ್ರೀ ವೈಶಂಪಾಯನ ಉವಾಚ ।
ಶ್ರುತ್ವಾ ಧರ್ಮಾನ್ ಅಶೇಷೇಣ ಪಾವನಾನಿ ಚ ಸರ್ವಶಃ ।
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭಾಷತ ॥
ಶ್ರೀ ವೈಶಂಪಾಯನರು ಹೀಗೆ ಹೇಳಿದರು:
ಪಾವನವಾದ ಧರ್ಮಗಳನ್ನು ಸಂಪೂರ್ಣವಾಗಿ, ಎಲ್ಲ ರೀತಿಯಲ್ಲಿಯೂ ಕೇಳಿದ ನಂತರ, ಯುಧಿಷ್ಠಿರನು ಶಾಂತನವನಾದ ಭೀಷ್ಮನನ್ನು ಮತ್ತೆ ಹೀಗೆಂದು ಪ್ರಶ್ನಿಸಿದನು.
ಇಲ್ಲಿ ವೈಶಂಪಾಯನರು ಜನಮೇಜಯನಿಗೆ ನಿರೂಪಿಸುತ್ತಾ ಹೇಳುತ್ತಾರೆ. ಧರ್ಮರಾಜ ಯುಧಿಷ್ಠಿರ ಭೀಷ್ಮರಲ್ಲಿ ಈಗಾಗಲೇ ಅನೇಕ ವಿಧದ (ರಾಜಧರ್ಮ, ಆಪದ್ಧರ್ಮ, ದಾನಧರ್ಮ, ನೀತಿಶಾಸ್ತ್ರ, ಅರ್ಥಶಾಸ್ತ್ರ, ಯುದ್ಧನೀತಿ, ಜೀವನಪದ್ಧತಿ) ಧರ್ಮಗಳ ಬಗ್ಗೆ ಕೇಳಿದ್ದಾನೆ. ಆದರೆ ಅವನ ಮನಸ್ಸಿನ ಅಂತಿಮ ಪ್ರಶ್ನೆ ಇನ್ನೂ ಉಳಿದೇ ಇರುತ್ತದೆ:
“ಇವೆಲ್ಲಕ್ಕೂ ಮೀರಿದ ಧರ್ಮ ಯಾವುದು? ಮಾನವನನ್ನು ಪರಮಶ್ರೇಯಸ್ಸಿಗೆ ಕರೆದೊಯ್ಯುವ ಸರ್ವೋತ್ತಮ ಮಾರ್ಗ ಯಾವುದು?”
ಆಗ ವ್ಯಾಸರು ಬಳಸುವ ಪದ ಬಹಳ ಅರ್ಥಪೂರ್ಣ:
“शान्तनवः पुनरेवाभ्यभाषत” “ಶಂತನುವಿನ ಮಗನಾದ ಭೀಷ್ಮನು ಮತ್ತೆ ಅದೇ ಮಾತನ್ನು ಹೇಳಿದರು.” ಇಲ್ಲಿನ “पुनरेव” ಎಂಬ ಪದವೇ ಅತ್ಯಂತ ಗಂಭೀರ. ಅದರ ಅರ್ಥ “ಮೊದಲ ಬಾರಿಗೆ ಹೇಳಿದನು” ಎಂದಲ್ಲ; “ಪೂರ್ವದಿಂದಲೂ ಪ್ರಸಿದ್ಧವಾಗಿದ್ದ ಸತ್ಯವನ್ನೇ ಪುನಃ ಪ್ರತಿಪಾದಿಸಿದನು.” ಅಂದರೆ, ವಿಷ್ಣುಸಹಸ್ರನಾಮ ಎಂಬುದು ಭೀಷ್ಮನ ವೈಯಕ್ತಿಕ ರಚನೆ ಅಲ್ಲ. ಅದು ಸನಾತನ ಪರಂಪರೆಯಲ್ಲಿ ಪೂರ್ವದಿಂದಲೂ ಹರಿದು ಬಂದ ಮಹಾಮಂತ್ರ ಸಮಾನ ಸ್ತೋತ್ರ. ಭೀಷ್ಮನು ತನ್ನ ಶರಶಯ್ಯೆಯ ಅಂತಿಮ ಕ್ಷಣಗಳಲ್ಲಿ, ಧರ್ಮದ ಸಾರವೇನು ಎಂದು ಕೇಳಿದ ಯುದ್ಧಿಷ್ಠಿರನಿಗೆ ಅದನ್ನೇ ಪುನಃ ಉಪದೇಶಿಸಿದನು. ಅಂದರೆ, ಧರ್ಮಗಳೆಲ್ಲ ಕೊನೆಗೆ ಯಾವ ಕಡೆ ಸೇರುತ್ತವೆ? ನಾಮಸ್ಮರಣೆ, ಭಗವದಾಶ್ರಯ, ಪರಮತತ್ತ್ವ ಚಿಂತನೆಗಳ ಕಡೆಗೆ ಎಂದು ಸಾರಾಂಶ. ಆದ್ದರಿಂದ ಇದು ಕೇವಲ “ಸ್ತೋತ್ರ”ವಲ್ಲ, ಎಲ್ಲಾ ಧರ್ಮಶಾಸ್ತ್ರಗಳ ಪರಿಪಾಕ. ಈ ವಿಷ್ಣುಸಹಸ್ರನಾಮ ಜ್ಞಾನ, ಭಕ್ತಿ, ವೈರಾಗ್ಯ, ಶರಣಾಗತಿ, ಇವೆಲ್ಲ ಒಂದಾಗಿ ಸೇರುವ ಸಂಗಮ ಎನ್ನುವುದೇ ಇದರ ಮೂಲಾರ್ಥ.
ಇಲ್ಲಿ ಯುಧಿಷ್ಠಿರ ಕೇಳುವ ಪ್ರಶ್ನೆಗಳು ಮಾನವ-ಜೀವನದ ಪರಮತತ್ತ್ವವನ್ನು ಹುಡುಕುವ ಪ್ರಶ್ನೆಗಳು. ಎಲ್ಲ ಧರ್ಮಗಳನ್ನು, ಶಾಸ್ತ್ರಗಳನ್ನು, ರಾಜನೀತಿಗಳನ್ನು ಕೇಳಿದ ನಂತರ ಅವನು ಸಾರವನ್ನು ಕೇಳುತ್ತಾನೆ. ಅದಕ್ಕಾಗಿ ಅವನು ಹೀಗೆ ಪ್ರಶ್ನಿಸುತ್ತಾನೆ: किमेकं दैवतं लोके? “ಈ ಲೋಕದಲ್ಲಿ ಒಂದೇ ಒಂದು ಪರಮ ದೈವತವು ಯಾವುದು?”
ಇಲ್ಲಿ “ಏಕಂ” ಎಂಬ ಪದ ಅತ್ಯಂತ ಮುಖ್ಯ. ಅನೇಕ ದೇವತೆಗಳ ನಡುವೆ ಶ್ರೇಷ್ಠ ಯಾರು ಎಂಬ ಪ್ರಶ್ನೆಯಷ್ಟೇ ಅಲ್ಲ ಇದು. ಎಲ್ಲ ಶಕ್ತಿಗಳ ಮೂಲವಾದ, ಎಲ್ಲ ದೇವತೆಗಳಿಗೂ ಆಧಾರವಾದ ಪರತತ್ತ್ವ ಯಾವುದು ಎಂಬ ಹುಡುಕಾಟ.
“ದೈವತ” ಎಂಬ ಪದಕ್ಕೂ ಇಲ್ಲಿ ಆಳವಾದ ಅರ್ಥವಿದೆ. ದೀಪಿಸುವುದು, ನಡೆಸುವುದು, ನಿಯಂತ್ರಿಸುವುದು; “ದಿವ್” ಧಾತುವಿನಿಂದ ಬಂದ ಪದ. ಯಾವನ ಆಜ್ಞೆಯಿಂದ ಸೂರ್ಯ ಉದಯಿಸುತ್ತಾನೆ, ವಾಯು ಬೀಸುತ್ತದೆ, ಕಾಲ ಸಾಗುತ್ತದೆ, ಜೀವಿಗಳು ವರ್ತಿಸುತ್ತವೆ? ಆ ಪರನಿಯಾಮಕ ಯಾರು?
ಅದಾದಮೇಲೆ: किं वाप्येकं परायणम्? “ಮಾನವನಿಗೆ ಪರಮಾಶ್ರಯ ಯಾವುದು?” “ಪರಾಯಣ” ಎಂದರೆ ಕೊನೆಗೆ ಸೇರುವ ತೀರ. ಎಲ್ಲ ಪ್ರಯತ್ನಗಳ ಅಂತ್ಯದಲ್ಲಿ ಜೀವನು ನೆಲೆಸುವ ಆಶ್ರಯ. ಧರ್ಮ, ಅರ್ಥ, ಕಾಮ, ಮೋಕ್ಷ, ಇವೆಲ್ಲದರ ಪಾರಾಗಿ ಉಳಿಯುವ ಶಾಶ್ವತ ಆಧಾರ.
ನಂತರ ಅವನು ಇನ್ನೂ ಪ್ರಾಯೋಗಿಕವಾಗಿ ಕೇಳುತ್ತಾನೆ: स्तुवन्तः कं? कमर्चन्तः? “ಯಾವನನ್ನು ಸ್ತುತಿಸಿದರೆ? ಯಾವನನ್ನು ಅರ್ಚಿಸಿದರೆ?” ಇದು ಕೇವಲ ತತ್ತ್ವಚಿಂತನೆ ಅಲ್ಲ. ಜೀವನದಲ್ಲಿ ಆಚರಿಸಬಹುದಾದ ಮಾರ್ಗ ಯಾವುದು ಎಂಬ ಪ್ರಶ್ನೆ.
ಅದರ ಫಲವೇನು?
प्राप्नुयुर्मानवाः शुभम् “ಮಾನವರು ಶೀಘ್ರವಾಗಿ ಶುಭವನ್ನು ಹೇಗೆ ಹೊಂದುತ್ತಾರೆ?” ಇಲ್ಲಿನ “ಶುಭ” ಎಂಬುದು ಕೇವಲ ಭೌತಿಕ ಮಂಗಳವಲ್ಲ. ಚಿತ್ತಶುದ್ಧಿ, ಭಯನಾಶ, ಧರ್ಮನಿಷ್ಠೆ, ಅಂತಃಶಾಂತಿ, ಮೋಕ್ಷಪ್ರಾಪ್ತಿ — ಇವೆಲ್ಲವೂ ಒಳಗೊಂಡ ಸಮಗ್ರ ಮಂಗಳ.
ಇಲ್ಲಿ ಆದಿ ಶಂಕರಾಚಾರ್ಯರ ಭಾಷ್ಯ ಅತ್ಯಂತ ಗಂಭೀರವಾದ ವೇದಾಂತ ಸಾರವನ್ನು ತೆರೆದಿಡುತ್ತದೆ. “ಕಿಂ ವಾಪ್ಯೇಕಂ ಪರಾಯಣಮ್?” ಎಂಬ ಪ್ರಶ್ನೆಯನ್ನು ಶಂಕರರು ಮೋಕ್ಷಸಾಧನದ ಪ್ರಶ್ನೆ ಎಂದು ಅವರು ವಿವರಿಸುತ್ತಾರೆ. ಅವರು ನೀಡುವ ತಾತ್ಪರ್ಯ ಹೀಗಿದೆ:
“ಯಸ್ಯ ವಿಜ್ಞಾನಮಾತ್ರೇಣ ಆನಂದಲಕ್ಷಣೋ ಮೋಕ್ಷಃ ಪ್ರಾಪ್ಯತೇ” “ಯಾವುದನ್ನು ಅರಿತುಕೊಳ್ಳುವುದರಿಂದಲೇ ಆನಂದಸ್ವರೂಪವಾದ ಮೋಕ್ಷ ದೊರೆಯುತ್ತದೆ…”. ಇಲ್ಲಿ “ವಿಜ್ಞಾನ” ಎಂದರೆ ಕೇವಲ ಮಾಹಿತಿ ಅಥವಾ ಪಾಠದ ಜ್ಞಾನವಲ್ಲ. ಅನುಭವಸಹಿತ ಆತ್ಮಸಾಕ್ಷಾತ್ಕಾರ. ಬ್ರಹ್ಮತತ್ತ್ವದ ಅನುಭವವೇ “ವಿಜ್ಞಾನ”.
ಅದಕ್ಕಾಗಿ: “ಯದ್ವಿದ್ವಾನ್ ನ ಬಿಭೇತಿ ಕುತಶ್ಚನ”“ಯಾರನ್ನು ಅರಿತವನಿಗೆ ಯಾವುದರಿಂದಲೂ ಭಯವಿರುವುದಿಲ್ಲ.”
ಭಯದ ಮೂಲವೇ ದ್ವೈತ. “ನಾನು” ಮತ್ತು “ಇನ್ನೊಂದು” ಎಂಬ ಭೇದ. ಆದರೆ ಎಲ್ಲವೂ ಅದೇ ಪರಬ್ರಹ್ಮಸ್ವರೂಪ ಎಂದು ಅನುಭವವಾದಾಗ ಭಯಕ್ಕೆ ಸ್ಥಳವೇ ಇಲ್ಲ.
ಇದು ಭೃಹದಾರಣ್ಯಕ ಉಪನಿಷತ್ತಿನ ನ ಪ್ರಸಿದ್ಧ ವಾಕ್ಯವನ್ನು ನೆನಪಿಸುತ್ತದೆ: “द्वितीयाद्वै भयं भवति “ಎರಡನೆಯದ್ದರಿಂದಲೇ ಭಯ ಹುಟ್ಟುತ್ತದೆ.”
ಮುಂದಿನ ಅರ್ಥ ಇನ್ನೂ ಆಳವಾದುದು: “ಯತ್ ಪ್ರವಿಷ್ಟಸ್ಯ ನ ವಿದ್ಯತೇ ಪುನರ್ಭವಃ” “ಯಾವುದನ್ನು ಪ್ರಾಪ್ತನಾದವನಿಗೆ ಮತ್ತೆ ಜನ್ಮವಿಲ್ಲ.” ಇದು ಮೋಕ್ಷದ ನಿರ್ವಚನೆ. ಸಂಸಾರಚಕ್ರಕ್ಕೆ ಮರುಪ್ರವೇಶವಿಲ್ಲದ ಸ್ಥಿತಿ.
ನಂತರ ಶಂಕರರು ಮುಂಡಕ ಉಪನಿಷತ್ತಿನ ಮಹಾವಾಕ್ಯವನ್ನು ಉಲ್ಲೇಖಿಸುತ್ತಾರೆ: “ब्रह्मवेद ब्रह्मैव भवति” “ಬ್ರಹ್ಮವನ್ನು ಅರಿತವನು ಬ್ರಹ್ಮವೇ ಆಗುತ್ತಾನೆ.”
ಮುಂದೆ ಅವರು ಇನ್ನೂ ನಿರ್ಣಾಯಕವಾಗಿ ಹೇಳುತ್ತಾರೆ: “नान्यः पन्था विद्यतेऽयनाय” “ಇದನ್ನು ಬಿಟ್ಟು ಮತ್ತೊಂದು ಮಾರ್ಗವೇ ಇಲ್ಲ.” (ಶ್ವೇತಶ್ವತರ ಉಪನಿಷತ್ತು). ಮಾನವನು ಎಷ್ಟೇ ಮಾರ್ಗಗಳಲ್ಲಿ ಅಲೆದರೂ, ಕೊನೆಗೆ ತಲುಪಬೇಕಾದ ತೀರ ಪರಬ್ರಹ್ಮಸ್ವರೂಪ.
ಆದ್ದರಿಂದ “ಪರಾಯಣ” ಎಂದರೆ: ಕೊನೆಯ ಆಶ್ರಯ, ಅಂತಿಮ ಗುರಿ, ಭಯನಾಶಕ ತತ್ತ್ವ, ಪುನರ್ಜನ್ಮನಾಶಕ ಜ್ಞಾನ, ಅರಿತವನೇ ಅದಾಗುವ ಪರಮಸತ್ಯ ಹೀಗಾಗಿ ಯುದ್ಧಿಷ್ಠಿರನ ಎರಡನೇ ಪ್ರಶ್ನೆ: “ಮಾನವನ ಜೀವನದ ಅಂತಿಮ ತೀರ ಯಾವುದು?” ಎಂಬುದಾಗಿದೆ. ಭೀಷ್ಮನ ಉತ್ತರದಲ್ಲಿ ಆ ಪರಾಯಣವನ್ನು ವಿಷ್ಣು ಸ್ವರೂಪದಲ್ಲಿ ಪ್ರತಿಪಾದಿಸಲಾಗುತ್ತದೆ: ನಾಮ, ರೂಪ, ಉಪಾಸನೆಗಳ ಮೂಲಕ ಮನಸ್ಸನ್ನು ಏಕಾಗ್ರಗೊಳಿಸಿ, ಕೊನೆಗೆ ಅದೇ ನಿರ್ಗುಣ ಪರಬ್ರಹ್ಮದಲ್ಲಿ ಲೀನಗೊಳಿಸುವ ಮಾರ್ಗವಾಗಿ.
ಯುಧಿಷ್ಠಿರ ಕೇಳಿದ ಈ ಆರು ಪ್ರಶ್ನೆಗಳೇ ವಿಷ್ಣು ಸಹಸ್ರನಾಮದ ಮೂಲಭೂತ ಆಧಾರ. ಇವು ಕೇವಲ ಪ್ರಶ್ನೆಗಳಲ್ಲ — ಮಾನವಜೀವನದ ಸಂಪೂರ್ಣ ಆಧ್ಯಾತ್ಮಿಕ ಹುಡುಕಾಟದ ಸಾರ. ಇವುಗಳನ್ನು ಒಂದೊಂದಾಗಿ ನೋಡಿದರೆ:
1. किमेकं दैवतं लोके? “ಈ ಲೋಕದಲ್ಲಿ ಪರಮ ದೈವತ ಯಾವುದು?” ಅನೇಕ ದೇವತೆಗಳು, ಅನೇಕ ಶಕ್ತಿಗಳು, ಅನೇಕ ಆರಾಧನೆಗಳ ನಡುವೆ ಎಲ್ಲಕ್ಕೂ ಮೂಲವಾದ ಪರತತ್ತ್ವ ಯಾವುದು?
2. किं वा एकं परायणम्? “ಮಾನವನಿಗೆ ಅಂತಿಮ ಆಶ್ರಯ ಯಾವುದು?” ಜೀವನದ ಎಲ್ಲ ಪ್ರಯತ್ನಗಳು ಕೊನೆಗೆ ಸೇರುವ ತೀರ ಯಾವುದು? ಭಯ, ದುಃಖ, ಜನನ–ಮರಣಗಳಾಚೆ ಇರುವ ನಿತ್ಯ ಆಶ್ರಯ ಯಾವುದು?
3. स्तुवन्तः कम्? “ಯಾರನ್ನು ಸ್ತುತಿಸುತ್ತ?” ಸ್ತೋತ್ರ, ಕೀರ್ತನೆ, ನಾಮಸ್ಮರಣೆ — ಇವುಗಳ ಗುರಿ ಯಾರು?
4. कमर्चन्तः? “ಯಾರನ್ನು ಅರ್ಚಿಸುತ್ತ?” ಉಪಾಸನೆ, ಪೂಜೆ, ಧ್ಯಾನ — ಯಾವ ತತ್ತ್ವದ ಕಡೆ ಮುಖ ಮಾಡಬೇಕು?
5. प्राप्नुयुर्मानवाः शुभम्? “ಮಾನವರು ಶುಭವನ್ನು ಹೇಗೆ ಹೊಂದುತ್ತಾರೆ? ಇಲ್ಲಿನ “ಶುಭ” ಎಂದರೆ ಕೇವಲ ಐಹಿಕ ಮಂಗಳವಲ್ಲ. ಚಿತ್ತಶುದ್ಧಿ, ಶಾಂತಿ, ಧರ್ಮನಿಷ್ಠೆ, ಭಯರಹಿತತೆ, ಮೋಕ್ಷಪ್ರಾಪ್ತಿ — ಸಮಗ್ರ ಮಂಗಳ.
6. को धर्मः सर्वधर्माणां भवतः परमो मतः? “ಎಲ್ಲ ಧರ್ಮಗಳಲ್ಲಿಯೂ ಶ್ರೇಷ್ಠ ಧರ್ಮ ಯಾವುದು?” ಇದು ಅತ್ಯಂತ ಗಂಭೀರ ಪ್ರಶ್ನೆ. ವರ್ಣಧರ್ಮ, ಆಶ್ರಮಧರ್ಮ, ರಾಜಧರ್ಮ, ಯಜ್ಞ, ದಾನ, ತಪಸ್ಸು, ಇವೆಲ್ಲಕ್ಕೂ ಮೀರಿ ಉಳಿಯುವ ಧರ್ಮ ಯಾವುದು?
7. किं जपन् मुच्यते जन्तुः जन्मसंसारबन्धनात्? “ಯಾವ ಜಪವನ್ನು ಮಾಡಿದರೆ ಜೀವಿ ಜನನ–ಮರಣ ಬಂಧನದಿಂದ ಮುಕ್ತನಾಗುತ್ತಾನೆ?” ಇದು ಪ್ರಶ್ನೆಗಳ ಪರಾಕಾಷ್ಠೆ. ಮಾನವನ ಅಂತಿಮ ಸಮಸ್ಯೆ — ಸಂಸಾರಬಂಧನ. ಅದರಿಂದ ವಿಮುಕ್ತಿ ನೀಡುವ ಸಾಧನ ಯಾವುದು?
ಈ ಎಲ್ಲಾ ಪ್ರಶ್ನೆಗಳಿಗೆ ಭೀಷ್ಮ ಕೊಡುವ ಒಂದೇ ಸಮಗ್ರ ಉತ್ತರ: ಶ್ರೀ ವಿಷ್ಣುವಿನ ಸಹಸ್ರನಾಮ ಸ್ಮರಣೆ. ಅಂದರೆ ಸಹಸ್ರನಾಮವು ಕೇವಲ “ಸಾವಿರ ಹೆಸರುಗಳ ಪಟ್ಟಿ” ಅಲ್ಲ; ಮಾನವನು ಕೇಳಬಹುದಾದ ಅತ್ಯುನ್ನತ ಪ್ರಶ್ನೆಗಳಿಗೆ ನೀಡಿದ ಸಂಕ್ಷಿಪ್ತ ವೇದಾಂತ ಉತ್ತರ. ಅದರ ಕಾರಣಕ್ಕಾಗಿ ಆದಿ ಶಂಕರರು ಸಹಸ್ರನಾಮವನ್ನು ಕೇವಲ ಭಕ್ತಿಗ್ರಂಥವಲ್ಲ, ಉಪನಿಷತ್ತಿನ ಸಾರವೆಂದು ನೋಡುತ್ತಾರೆ.
ಭೀಷ್ಮ ಉವಾಚ — ಭಾಷ್ಯಾರ್ಥ ಮತ್ತು ತಾತ್ಪರ್ಯ
भीष्म उवाच ।
जगत्प्रभुं देवदेवमनन्तं पुरुषोत्तमम् ।
स्तुवन्नामसहस्रेण पुरुषः सततोत्थितः ॥
“ಭೀಷ್ಮ ಉವಾಚ” — ಇದರ ಮಹತ್ವ
ಭೀಷ್ಮ “ಹೀಗೆ ಹೇಳಿದರು” ಎಂದು ಮಾತ್ರ ಹೇಳಿಲ್ಲ. ಆದಿ ಶಂಕರರು ಇಲ್ಲಿ “ಭೀಷ್ಮ” ಎಂಬ ಶಬ್ದಕ್ಕೇ ವಿಶೇಷ ಅರ್ಥವನ್ನು ನೀಡುತ್ತಾರೆ. “ಸರ್ವೇಷಾಂ ಬಹಿರಂತರ ಶತ್ರೂಣಾಂ ಭಯಹೇತುಃ ಭೀಷ್ಮಃ” “ಹೊರಗಿನ ಶತ್ರುಗಳಿಗೂ, ಒಳಗಿನ ಶತ್ರುಗಳಿಗೂ ಭಯಕ್ಕೆ ಕಾರಣನಾಗಿರುವವನು ಭೀಷ್ಮ”. ಹೊರಗಿನ ಶತ್ರುಗಳು — ಶಸ್ತ್ರ, ರಾಜರು, ವೈರಿಗಳು. ಒಳಗಿನ ಶತ್ರುಗಳು — ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ. ಇಂತಹ ಮಹಾಜ್ಞಾನಿ, ಮೋಕ್ಷಧರ್ಮಾದಿ ಗಂಭೀರ ತತ್ತ್ವಗಳನ್ನು ಉಪದೇಶಿಸಿದ ಸರ್ವಜ್ಞನಾದ ಭೀಷ್ಮನು ಹೇಳುತ್ತಿರುವುದರಿಂದ ಈ ಉಪದೇಶಕ್ಕೆ ಅಪಾರ ಪ್ರಾಮುಖ್ಯತೆ ಬರುತ್ತದೆ.
“ಜಗತ್ ಪ್ರಭುಂ” “ಜಗತ್ ಸ್ಥಾವರಜಂಗಮಾತ್ಮಕಂ”, ಜಗತ್ ಎಂದರೆ ಚರಾಚರಾತ್ಮಕವಾದ ಸೃಷ್ಟಿ, ಸ್ಥಾವರ (ನಿಶ್ಚಲ) ಮತ್ತು ಜಂಗಮ (ಚರ) ಎಲ್ಲವೂ. ಅದರ ಸ್ವಾಮಿ, ನಿಯಂತ್ರಕ, ಒಡೆಯ ಆಗಿರುವವನು “ಜಗತ್ಪ್ರಭು”.
“ದೇವದೇವಂ” “ದೇವಾನಾಂ ಬರ್ರಹ್ಮಾದೀನಾಂ ದೇವಂ” ಬ್ರಹ್ಮ, ಇಂದ್ರ, ರುದ್ರಾದಿ ದೇವತೆಗಳಿಗೂ ದೇವನಾಗಿರುವವನು. ದೇವತೆಗಳಿಗೆ ಶಕ್ತಿಯನ್ನು ಕೊಡುವ ಮೂಲಶಕ್ತಿ ಅವನೇ.
“ಅನಂತಂ”, ಅನಂತಂ ದೇಶತಃ ಕಾಲತಃ ವಸ್ತುತಃ ಚ ಅಪರಿಚ್ಛನ್ನಂ. ಆದಿ ಶಂಕರರು ದೇಶತಃ - ಸ್ಥಳದಿಂದ ಮಿತಿಯಿಲ್ಲದ, ಕಾಲತಃ - ಕಾಲದಿಂದ ಮಿತಿಯಿಲ್ಲದ, ವಸ್ತುತಃ - ವಸ್ತುಸ್ವರೂಪದಿಂದ ಮಿತಿಯಿಲ್ಲದ, ಎಲ್ಲೆಡೆ ಇರುವನು, ಯಾವಾಗಲೂ ಇರುವನು, ಎಲ್ಲ ರೂಪಗಳಿಗೂ ಆಧಾರವಾಗಿರುವನು ಎಂದು ಅರ್ಥೈಸುತ್ತಾರೆ
“ಪುರುಷೋತ್ತಮಂ” - ಕ್ಷರ-ಅಕ್ಷರಾಭ್ಯಾಂ ಕಾರ್ಯ-ಕಾರಣಾಭ್ಯಾಂ ಉತ್ಕೃಷ್ಟಮ್ ।
ಕ್ಷರ ಮತ್ತು ಅಕ್ಷರ, ಕಾರ್ಯ ಮತ್ತು ಕಾರಣ, ಇವೆರಡಕ್ಕೂ ಮೀರಿದ ಪರತತ್ತ್ವ ಕ್ಷರ - ನಾಶವಾಗುವ ಭೌತಿಕ ಜಗತ್ತು. ಅಕ್ಷರ - ಸ್ಥಿರ ಕಾರಣತತ್ತ್ವ, ಇವೆರಡಕ್ಕೂ ಮೀರಿದವನು ಪುರುಷೋತ್ತಮನು.
“ನಾಮಸಹಸ್ರೇಣ ಸ್ತುವನ್” ಸಾವಿರ ನಾಮಗಳಿಂದ ಸ್ತುತಿಸುತ್ತಾ, ಅವನ ಗುಣ, ಮಹಿಮೆ, ಕರುಣೆ, ಶಕ್ತಿ ಇತ್ಯಾದಿಗಳನ್ನು ಕೀರ್ತಿಸುತ್ತಾ. ಇದು ಕೇವಲ ಹೆಸರುಗಳನ್ನು ಹೇಳುವುದಲ್ಲ - ಗುಣಾನುಸಂಧಾನ.
“ಸತತೋತ್ತಿತಃ” ಯಾವಾಗಲೂ ಜಾಗೃತನಾಗಿ, ಉದ್ಯುಕ್ತನಾಗಿ, ಆಧ್ಯಾತ್ಮಿಕ ಚಿಂತನೆಗೆ ಎದ್ದಿರುವವನು. ದೇಹ ಎದ್ದಿರುವುದಷ್ಟೇ ಅಲ್ಲ, ಚಿತ್ತವೂ ಎಚ್ಚರವಾಗಿರಬೇಕು.
“ಪುರುಷಃ” ಇಲ್ಲಿ “ಪುರುಷ” ಎಂಬ ಪದಕ್ಕೂ ಭಾಷ್ಯದಲ್ಲಿ ಸುಂದರ ವಿವರಣೆ ಇದೆ: ಪೂರ್ಣತ್ವಾತ್ - ಪೂರ್ಣಸ್ವರೂಪನಾದುದರಿಂದ, ಪುರಿ ಶಯನಾತ್ - ಈ ದೇಹಪುರದಲ್ಲಿ ಇರುವುದರಿಂದ “ಪುರುಷ” ಎಂಬ ಹೆಸರು.
“ಸರ್ವದುಃಖಾತಿಗೋ ಭವೇತ್” ಈ ಪಾದವನ್ನು ಎಲ್ಲಾ ಶ್ಲೋಕಗಳಿಗೂ ಅನ್ವಯಿಸಬೇಕು ಎಂದು ಶ್ರೀ ಶಂಕರರು ಸೂಚಿಸುತ್ತಾರೆ. ಅಂದರೆ ಇಂತಹ ಪರಮಾತ್ಮನನ್ನು ನಿತ್ಯ ಸ್ತುತಿಸುವವನು, ಧ್ಯಾನಿಸುವವನು, ಭಕ್ತಿಯಿಂದ ಆರಾಧಿಸುವವನು ಎಲ್ಲ ದುಃಖಗಳನ್ನು ದಾಟುವನು. ಇಲ್ಲಿ “ದುಃಖ” ಎಂದರೆ ಕೇವಲ ಲೋಕದ ಕಷ್ಟವಲ್ಲ - ಜನನಮರಣರೂಪ ಸಂಸಾರವೇ. ಇಲ್ಲಿ ಭೀಷ್ಮರು ಮೊದಲು ಪರಮಾತ್ಮನ ಸ್ವರೂಪವನ್ನು ಸ್ಥಾಪಿಸುತ್ತಾರೆ - ಆತನು ಯಾರು? ಏಕೆ ಅವನೇ ಪರಾಯಣ? ಏಕೆ ಅವನ ನಾಮಸ್ಮರಣೆ ಶ್ರೇಷ್ಠ? ಏಕೆ ಇದು “ಧರ್ಮಗಳಲ್ಲಿ ಶ್ರೇಷ್ಠ ಧರ್ಮ”? ಎಂಬುದಕ್ಕೆ ಅಡಿಪಾಯವನ್ನು ಇಡುತ್ತಾರೆ.
ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ ।
ಲೋಕನಾಥಂ ಮಹದ್ಭೂತಂ ಸರ್ವಭೂತಭವೋದ್ಭವಮ್ ॥
- ಬ್ರಹ್ಮಣ್ಯಂ (brahmaṇyam) - ಬ್ರಹ್ಮವನ್ನು ಆಶ್ರಯಿಸುವವನು, ವೇದಧರ್ಮದ ರಕ್ಷಕ; ಬ್ರಾಹ್ಮಣರು, ವೇದ, ತಪಸ್ಸು, ಜ್ಞಾನ ಇವುಗಳ ಪಾಲಕ. ವೇದಗಳ ಮೂಲಕ ತಿಳಿಯುವವನು; वेदैश्च सर्वैरहमेव वेद्यः - ವೇದಗಳೆಲ್ಲವೂ ನನ್ನನ್ನೇ ತಿಳಿಸುತ್ತವೆ (ಗೀತಾ 15.15). ब्रह्मणो हि प्रतिष्ठाऽहम् - ನಾನೇ ಬ್ರಹ್ಮನ ಆಧಾರ.
- ಸರ್ವಧರ್ಮಜ್ಞಂ = “ಸಮಸ್ತ ಧರ್ಮಗಳನ್ನೂ ಸಂಪೂರ್ಣವಾಗಿ ತಿಳಿದಿರುವವನು”. ಸರ್ವೇಷಾಂ ಧರ್ಮಾಣಾಂ ಜ್ಞಃ - “ಎಲ್ಲಾ ಧರ್ಮಗಳ ಜ್ಞಾನಿಯು”. ಇಲ್ಲಿ “ಧರ್ಮ” ಎಂದರೆ ಕೇವಲ ಪುಣ್ಯಕರ್ಮವಲ್ಲ. "यः सर्वज्ञः सर्ववित्" - “ಯಾವನು ಸರ್ವಜ್ಞನು, ಸರ್ವವಿತ್ತನು” (Mundaka Upanishad 1.1.9). ಸಮಸ್ತ ಧರ್ಮ, ಕರ್ಮ, ನೀತಿ, ಸತ್ಯ, ಮತ್ತು ಜಗತ್ತಿನ ನಿಯಮಗಳ ಸಂಪೂರ್ಣ ಜ್ಞಾನಿಯು — ಶ್ರೀಮಹಾವಿಷ್ಣು. ಇದರಲ್ಲಿ ಒಳಗೊಂಡಿರುವ ಸಮಗ್ರ ಜ್ಞಾನವು ಭಗವಂತನಲ್ಲೇ ಸಂಪೂರ್ಣವಾಗಿದೆ
- ವೇದವಿಹಿತ ಕರ್ಮ
- ವರ್ಣಾಶ್ರಮಧರ್ಮ
- ಯಜ್ಞ, ದಾನ, ತಪಸ್ಸು
- ಲೋಕನಿಯಮ
- ಕರ್ಮಫಲಸಂಬಂಧ
- ಆತ್ಮಧರ್ಮ
- ಸಾಧನಚತುಷ್ಟಯ
- ಮೋಕ್ಷಮಾರ್ಗ
- ಲೋಕಾನಾಂ ಕೀರ್ತಿವರ್ಧನಮ್: “ಲೋಕಗಳ ಕೀರ್ತಿಯನ್ನು ವೃದ್ಧಿಪಡಿಸುವವನು” ಅಥವಾ “ಜಗತ್ತಿನ ಮಹಿಮೆಯನ್ನು ಹೆಚ್ಚಿಸುವವನು”. “ಲೋಕ” ಎಂದರೆ ಈ ಪ್ರಪಂಚ, ವಿಶ್ವ, ಜನಸಮೂಹ, ಮಾನವರು; ಜೀವನು ಕರ್ಮಫಲವನ್ನು ಅನುಭವಿಸುವ ಸ್ಥಿತಿ ಅಥವಾ ಕ್ಷೇತ್ರ; ಭೂಲೋಕ, ಸ್ವರ್ಗಲೋಕ, ಪಿತೃಲೋಕ, ದೇವಲೋಕ, ಬ್ರಹ್ಮಲೋಕ. ಯಾವುದು ತಿಳಿಯಲ್ಪಡುತ್ತದೆಯೋ / ಅನುಭವಿಸಲ್ಪಡುತ್ತದೆಯೋ ಅದು ಲೋಕ. “ಲೋಕ” ಎಂದರೆ ಕೇವಲ ಭೌತಿಕ ಜಗತ್ತಲ್ಲ, ಇದು ದೇಹಲೋಕ, ಮನೋಲೋಕ, ದೇವಲೋಕ, ಜ್ಞಾನಲೋಕ ಎಲ್ಲವನ್ನೂ ಸೂಚಿಸಬಹುದು. ಭಗವಂತನ ಸ್ಮರಣೆ ಮತ್ತು ಜ್ಞಾನದಿಂದ ಅಂತಃಕರಣ ಶುದ್ಧವಾಗುತ್ತದೆ, ಆತ್ಮಮಹಿಮೆ ಪ್ರಕಾಶಿಸುತ್ತದೆ. ಅದರರಿಂದ ಆತನು “ಲೋಕಾನಾಂ ಕೀರ್ತಿವರ್ಧನಮ್”. अतोऽस्मि लोके वेदे च प्रथितः पुरुषोत्तमः । “ಆದ್ದರಿಂದ ನಾನು ಲೋಕದಲ್ಲಿಯೂ ವೇದದಲ್ಲಿಯೂ ಪ್ರಸಿದ್ಧನಾಗಿದ್ದೇನೆ.”
- ಲೋಕನಾಥಂ: ಸಮಸ್ತ ಲೋಕಗಳ ಸ್ವಾಮಿ, ರಕ್ಷಕ, ಆಶ್ರಯ ಮತ್ತು ಅಂತರ್ಯಾಮಿ ಪರಮಾತ್ಮ: “ನಾಥ” ಎಂದರೆ ಕೇವಲ ರಾಜನಲ್ಲ. ಇದಕ್ಕೆ ರಕ್ಷಕ, ಆಶ್ರಯದಾತ, ಪಾಲಕ ನಿಯಂತೃ, ಸ್ವಾಮಿ ಎಂಬ ಗಂಭೀರ ಅರ್ಥಗಳಿವೆ. गतिर्भर्ता प्रभुः साक्षी निवासः शरणं सुहृत् । “ನಾನೇ ಗತಿ, ಭರ್ತೃ, ಪ್ರಭು, ಆಶ್ರಯ.” ಇಲ್ಲಿ “ಭರ್ತಾ”, “ಪ್ರಭು”, “ಶರಣಂ”, ಇವೆಲ್ಲ “ನಾಥ” ಪದದ ಅರ್ಥವನ್ನು ಸೂಚಿಸುತ್ತವೆ. ಈಶ್ವರನು ಜಗತ್ತಿನ ನಿಯಾಮಕ, ಕರ್ಮಫಲದಾತ, ಅಂತರ್ಯಾಮಿ, ಸಮಸ್ತ ಜೀವಿಗಳ ಆಶ್ರಯ, ಹೀಗಾಗಿ “ಲೋಕನಾಥ”. ಬಾಹ್ಯ ಜಗತ್ತಿನ ಸ್ವಾಮಿ ಮಾತ್ರವಲ್ಲ, ಎಲ್ಲಾ ಜೀವಿಗಳ ಅಂತರಂಗನಿಯಂತೃ ಕೂಡ. एको देवः सर्वभूतेषु गूढः । “ಒಬ್ಬನೇ ದೇವನು ಎಲ್ಲಾ ಜೀವಿಗಳೊಳಗೆ ಅಂತರ್ನಿಹಿತನಾಗಿದ್ದಾನೆ.”
- ಮಹದ್ಭೂತಂ: ಮಹತ್ (ಮಹಾನ್, ಅತಿ ದೊಡ್ಡದು, ಉನ್ನತ), ಭೂತಂ (ಭವಿಸಿದುದು, ಅಸ್ತಿತ್ವವುಳ್ಳದ್ದು, ಅದ್ಭುತ ವಸ್ತು) ಮಹದ್ಭೂತಂ - “ಮಹಾ ಅದ್ಭುತಸ್ವರೂಪಿ” ಅಥವಾ “ಅತ್ಯಂತ ಮಹತ್ತರವಾದ ತತ್ತ್ವ”. “ಅನಂತ, ಅಚಿಂತ್ಯ, ವಿಶ್ವವ್ಯಾಪಿ ಮತ್ತು ಪರಮಾದ್ಭುತಸ್ವರೂಪನಾದ ಪರಮಾತ್ಮ.”
- ಸರ್ವಭೂತಭವೋದ್ಭವಮ್ - “ಸಮಸ್ತ ಜೀವಿಗಳ ಜನನ, ಅಸ್ತಿತ್ವ ಮತ್ತು ಸೃಷ್ಟಿಗೆ ಮೂಲಕಾರಣನಾದ ಪರಮಾತ್ಮ”. ಸರ್ವಭೂತಾನಾಂ ಭವಃ, ತಸ್ಯ ಉದ್ಭವಃ ಯಸ್ಮಾತ್ ಸರ್ವಭೂತಭವೋದ್ಭವಮ್ - “ಯಾವನಿಂದ ಎಲ್ಲಾ ಜೀವಿಗಳ ಭವ (ಉತ್ಪತ್ತಿ/ಅಸ್ತಿತ್ವ) ಉಂಟಾಗುತ್ತದೆಯೋ ಅವನು.” यतो वा इमानि भूतानि जायन्ते । येन जातानि जीवन्ति । यत्प्रयन्त्यभिसंविशन्ति ॥ “ಯಾವನಿಂದ ಎಲ್ಲಾ ಭೂತಗಳು ಹುಟ್ಟುತ್ತವೆಯೋ, ಯಾವನಿಂದ ಜೀವಿಸುತ್ತವೆಯೋ, ಯಾವನಲ್ಲಿ ಲಯವಾಗುತ್ತವೆಯೋ — ಅವನೇ ಬ್ರಹ್ಮ” (Taittiriya Upanishad 3.1.1) - “ಸರ್ವಭೂತಭವೋದ್ಭವಮ್” ಪದದ ನೇರ ತಾತ್ಪರ್ಯ. "अहं सर्वस्य प्रभवः मत्तः सर्वं प्रवर्तते" “ನಾನೇ ಎಲ್ಲದರ ಮೂಲ; ನನ್ನಿಂದಲೇ ಎಲ್ಲವೂ ಪ್ರವರ್ತಿಸುತ್ತದೆ.” (Bhagavad Gita 10.8).
ಏಷ ಮೇ ಸರ್ವ ಧರ್ಮಾಣಾಂ ಧರ್ಮೋಽಧಿಕತಮೋ ಮತಃ ।
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ ॥ 14 ॥
“ಎಲ್ಲ ಧರ್ಮಗಳಿಗಿಂತ ಶ್ರೇಷ್ಠವಾದ ಧರ್ಮ ಇದೇ. ಭಕ್ತಿಯಿಂದ ಪುಂಡರೀಕಾಕ್ಷನನ್ನು ಸದಾ ಸ್ತೋತ್ರಗಳಿಂದ ಆರಾಧಿಸುವುದು.”
(to be continued)
ವಿಷ್ಣು ಸಹಸ್ರನಾಮ ಪಾರಾಯಣದ ಮೊದಲು ಮಾಡುವ ಪೂರ್ವನ್ಯಾಸ / ವಿನಿಯೋಗ ಭಾಗ. ಇದರಲ್ಲಿ ಮಂತ್ರದ ಋಷಿ, ಛಂದಸ್ಸು, ದೇವತೆ, ಬೀಜ, ಶಕ್ತಿ, ಕೀಲಕ ಇತ್ಯಾದಿಗಳನ್ನು ಸೂಚಿಸಿ, ಪಾರಾಯಣವನ್ನು ಶಾಸ್ತ್ರೀಯವಾಗಿ ಆರಂಭಿಸಲಾಗುತ್ತದೆ.
न्यास (Nyāsa) ಎಂದರೆ “ಇಡುವುದು”, “ಸ್ಥಾಪಿಸುವುದು”, “ಅರ್ಪಿಸುವುದು”, “ಆವಾಹನೆ ಮಾಡುವುದು”. ಮಂತ್ರಶಾಸ್ತ್ರದಲ್ಲಿ, ದೇಹದ ವಿಭಿನ್ನ ಅಂಗಗಳಲ್ಲಿ ಮಂತ್ರಶಕ್ತಿಯನ್ನು ಸ್ಥಾಪಿಸುವ ಕ್ರಿಯೆಯನ್ನು “ನ್ಯಾಸ” ಎನ್ನುತ್ತಾರೆ. ನ್ಯಾಸ ಮಾಡುವಾಗ ಸಾಧಕನು ತನ್ನ ದೇಹವನ್ನು ಸಾಮಾನ್ಯ ದೇಹ ಎಂದು ನೋಡದೇ, ದೈವಮಂದಿರವಾಗಿ ಭಾವಿಸುತ್ತಾನೆ. ಅಂದರೆ, “ನನ್ನ ದೇಹದಲ್ಲೇ ದೇವತೆ ಸ್ಥಾಪಿತರಾಗಿದ್ದಾರೆ” ಎಂಬ ಆಧ್ಯಾತ್ಮಿಕ ಭಾವನೆ.
ವಿಷ್ಣು ಸಹಸ್ರನಾಮ ಪಾರಾಯಣದ ಮೊದಲು ಹೇಳುವ: ಋಷಿ, ಛಂದಸ್ಸು, ದೇವತೆ, ಬೀಜ, ಶಕ್ತಿ, ಕೀಲಕ, ಅಸ್ತ್ರ, ಕವಚ, ದಿಗ್ಬಂಧ ಇವೆಲ್ಲವೂ “ಪೂರ್ವನ್ಯಾಸ”ದ ಭಾಗ.
ನ್ಯಾಸದ ವಿಧಗಳು:
೧. ಕರನ್ಯಾಸ - ಕೈಬೆರಳುಗಳಲ್ಲಿ ಮಂತ್ರಸ್ಥಾಪನೆ. ಇದರಿಂದ ಕೈಗಳು ಪವಿತ್ರ ಕ್ರಿಯೆಗೆ ಯೋಗ್ಯವಾಗುತ್ತವೆ,
೨. ಅಂಗನ್ಯಾಸ: ದೇಹದ ಮುಖ್ಯ ಅಂಗಗಳಲ್ಲಿ ಮಂತ್ರಸ್ಥಾಪನೆ.
ನ್ಯಾಸದ ಮೂಲಕ ಸಾಧಕನು ದೇಹಾಭಿಮಾನವನ್ನು ಕಡಿಮೆ ಮಾಡುತ್ತಾನೆ, ದೈವಚೈತನ್ಯವನ್ನು ಒಳಗೆ ಅನುಭವಿಸಲು ಪ್ರಯತ್ನಿಸುತ್ತಾನೆ, ಮನಸ್ಸನ್ನು ಏಕಾಗ್ರಗೊಳಿಸುತ್ತಾನೆ. ನಾರಾಯಣ ಎಲ್ಲೆಡೆ ಇರುವವನಾದರೆ, ಸ್ವದೇಹದಲ್ಲಿಯೂ ಅವನೇ ಇರುವನು. ನ್ಯಾಸವೆಂದರೆ, ಆ ಸತ್ಯವನ್ನು ಸ್ಮರಿಸುವ ಸಾಧನೆ.
ನ್ಯಾಸ - “ಮಂತ್ರ ಮತ್ತು ದೇವತೆಯನ್ನು ಸ್ವದೇಹದಲ್ಲಿ ಸ್ಥಾಪಿಸುವ ಪವಿತ್ರ ಧ್ಯಾನಕ್ರಿಯೆ.” ಇದು ಕೇವಲ ಶಾರೀರಿಕ ಸ್ಪರ್ಶವಲ್ಲ; ಮನಸ್ಸು, ಪ್ರಾಣ ಮತ್ತು ದೈವಸ್ಮರಣೆಯನ್ನು ಒಂದಾಗಿಸುವ ಸಾಧನೆ. ಈ ನ್ಯಾಸ ಪ್ರಕ್ರಿಯೆಯ ಮೂಲಕ, ಭಗವಂತನ ಆರಾಧನೆಗೆ ತನ್ನ ಭೌತಿಕ ದೇಹವನ್ನು ಸಾಧಕನು ಸಿದ್ಧಗೊಳಿಸಿಕೊಳ್ಳುತ್ತಾನೆ.
ಪೂರ್ವನ್ಯಾಸದ ಉದ್ದೇಶ ದೇಹಶುದ್ಧಿ, ಮನಶ್ಶುದ್ಧಿ, ದೈವಸ್ಮರಣೆ, ಮಂತ್ರಚೈತನ್ಯ ಜಾಗೃತಿ. ಅದರಲ್ಲೇ ಬೀಜ ಶಕ್ತಿಸಾರ, ಶಕ್ತಿ ಕ್ರಿಯಾಶಕ್ತಿ, ಕೀಲಕ = ಶಕ್ತಿ ಅನಾವರಣ ಎಂಬ ಕ್ರಮ ಬರುತ್ತದೆ.
ಅಸ್ಯ ಶ್ರೀ ವಿಷ್ಣೋರ್ದಿವ್ಯ ಸಹಸ್ರನಾಮ ಸ್ತೋತ್ರ ಮಹಾಮಂತ್ರಸ್ಯ: “ಈ ಶ್ರೀ ವಿಷ್ಣುವಿನ ದಿವ್ಯ ಸಹಸ್ರನಾಮ ಮಹಾಮಂತ್ರದ…”. ಇಲ್ಲಿ “ಅಸ್ಯ” ಎಂಬ ಪದವು, ಇನ್ನೂ ಅನೇಕ ವಿಷ್ಣು ಸಹಸ್ರನಾಮಗಳು ಇರುವ ಸಾಧ್ಯತೆಯನ್ನು ಸೂಚಿಸುತ್ತದೆ. ಆದ್ದರಿಂದ ಇಲ್ಲಿ ಹೇಳಲ್ಪಡುವುದು ಈ ವಿಶೇಷ ವಿಷ್ಣು ಸಹಸ್ರನಾಮದ ಕುರಿತು ಎಂಬ ಅರ್ಥ ಬರುತ್ತದೆ। ಈ ಸಹಸ್ರನಾಮವು “ದಿವ್ಯ”, ಅಂದರೆ ದೈವಿಕವಾದದ್ದು. ಇದು ಸ್ವಯಂ ಪ್ರಕಾಶಮಾನವಾಗಿದ್ದು, ಜ್ಞಾನಪ್ರದ ಹಾಗೂ ಆತ್ಮವನ್ನು ಪ್ರಬುದ್ಧಗೊಳಿಸುವುದಾಗಿದೆ. ಇದು “ಸ್ತೋತ್ರ”ವೂ (ಭಗವಂತನ ಸ್ತುತಿರೂಪ ಗಾನ), “ಮಂತ್ರ”ವೂ (ಸಾಧಕನನ್ನು ರಕ್ಷಿಸುವುದು) ಆಗಿದೆ. ಇದು ಕೇವಲ ಮಂತ್ರವಲ್ಲ, “ಮಹಾಮಂತ್ರ”ವಾಗಿದೆ; ಏಕೆಂದರೆ ಇದು ಜೀವಿಯನ್ನು ಈ ಸಂಸಾರಸಾಗರದಿಂದ ಪಾರುಮಾಡುವ ಶಕ್ತಿಯನ್ನು ಹೊಂದಿದೆ।
೧. ಶ್ರೀ ವೇದವ್ಯಾಸೋ ಭಗವಾನ್ ಋಷಿಃ.: ಮಂತ್ರವನ್ನು ಸಾಕ್ಷಾತ್ಕರಿಸಿಕೊಂಡ ಮಹರ್ಷಿ ವೇದವ್ಯಾಸರು. ವೇದವ್ಯಾಸರು ಕೇವಲ ಋಷಿಯಲ್ಲ; ಅವರು ಸ್ವತಃ ವಿಷ್ಣುವಿನ ಅವತಾರರಾಗಿದ್ದಾರೆ. “ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ” ಎಂಬ ಪ್ರಸಿದ್ಧ ವಾಕ್ಯದ ಪ್ರಕಾರ, ವಿಷ್ಣುವೇ ವ್ಯಾಸರ ರೂಪದಲ್ಲಿ ಅವತರಿಸಿದ್ದಾನೆ. ಆದ್ದರಿಂದಲೇ ಅವರನ್ನು ಸಾಮಾನ್ಯ ಋಷಿ ಎಂದು ಮಾತ್ರವಲ್ಲ, “ಭಗವಾನ್ ಋಷಿಃ” ಎಂದು ಗೌರವದಿಂದ ಕರೆಯಲಾಗುತ್ತದೆ.
೨. ಛಂದಃ (ಛಂದಸ್ಸು / metre): ಅನುಷ್ಟುಪ್ ಛಂದಃ - ಈ ಸ್ತೋತ್ರವು “ಅನುಷ್ಟುಪ್” ಎಂಬ ಛಂದಸ್ಸಿನಲ್ಲಿ ರಚಿತವಾಗಿದೆ. ಅನುಷ್ಟುಪ್, ಶಬ್ದಶಕ್ತಿ, ಸಾಮಾನ್ಯವಾಗಿ ಪ್ರತಿಶ್ಲೋಕದಲ್ಲಿ ೩೨ ಅಕ್ಷರಗಳಿರುವ ವೇದೋಕ್ತ ಛಂದಸ್ಸು. “ಛಂದಃ” ಎಂದರೆ ವೇದಮಂತ್ರಗಳ ಲಯ, ಶಬ್ದರಚನೆಯ ಕ್ರಮ, ಪದ್ಯದ ಛಂದೋಬದ್ಧ ವಿನ್ಯಾಸ. ರಾಮಾಯಣ, ಮಹಾಭಾರತ, ಗೀತೆ ವಿಷ್ಣುಸಹಸ್ರನಾಮ ಇತ್ಯಾದಿ ಮಹಾಗ್ರಂಥಗಳಲ್ಲಿ ಇದು ವ್ಯಾಪಕವಾಗಿ ಬಳಕೆಯಾಗಿದೆ. ಅನುಷ್ಟುಪ್, ಸುಲಭವಾಗಿ ಪಠಿಸಬಹುದಾದ, ಮನಸ್ಸಿನಲ್ಲಿ ಉಳಿಯುವ, ಧ್ಯಾನಕ್ಕೆ ಅನುಕೂಲವಾದ ಛಂದಸ್ಸು ಎಂದು ಪರಿಗಣಿಸಲಾಗಿದೆ. ಸಹಸ್ರನಾಮದ ದೈವಿಕ ಶಬ್ದಪ್ರವಾಹವನ್ನು ಸರಿಯಾದ ರೀತಿಯಲ್ಲಿ ಹರಿಸುವ ಛಂದಸ್ಸೇ “ಅನುಷ್ಟುಪ್”.
೩. ದೇವತಾ: ಶ್ರೀಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ: ಈ ಮಂತ್ರದ ಆರಾಧ್ಯ ದೇವರು ಮಹಾವಿಷ್ಣು, ಪರಮಾತ್ಮ ಶ್ರೀಮನ್ನಾರಾಯಣ. “ದೇವತಾ” ಎಂದರೆ ಸ್ವತಃ ತನ್ನಲ್ಲೇ ಸಂಪೂರ್ಣನಾಗಿರುವವನು; ಬೇರೆ ಯಾವುದರ ಮೇಲೂ ಅವಲಂಬಿತನಾಗಿರದವನು. ಅವನು ನಮ್ಮನ್ನು ಈ ಭೌತಿಕ ಸಂಸಾರದ ಬಂಧನಗಳಿಂದ ಬಿಡುಗಡೆ ಮಾಡುವ ಶಕ್ತಿಯುಳ್ಳವನು. ದೇವತಾ ಸ್ವಯಂ ಪ್ರಕಾಶಮಾನನು, ಸ್ವಯಂ ತೇಜೋಮಯನು, ಸ್ವಯಂ ಅಸ್ತಿತ್ವ ಹೊಂದಿರುವವನು. ಅವನ ಅಸ್ತಿತ್ವಕ್ಕೂ, ಪ್ರಕಾಶಕ್ಕೂ, ಶಕ್ತಿಗೂ ಹೊರಗಿನ ಯಾವುದೂ ಕಾರಣವಾಗಿರುವುದಿಲ್ಲ।
೪. ಬೀಜಮ್: ಅಮೃತಾಂಶೂದ್ಭವೋ ಭಾನುರಿತಿ ಬೀಜಮ್: “ಅಮೃತಾಂಶೂದ್ಭವಃ ಭಾನುಃ” — ಇದು ಬೀಜಮಂತ್ರ. ಮಂತ್ರಶಾಸ್ತ್ರದಲ್ಲಿ “ಬೀಜ” ಎಂದರೆ ಸಂಪೂರ್ಣ ಮಂತ್ರದ ಸಾರ, ಸೂಕ್ಷ್ಮ ಶಕ್ತಿ, ಮಂತ್ರದ ಜೀವಶಕ್ತಿ, ಒಂದು “ಸಂಕುಚಿತ ದೈವಚೈತನ್ಯ”. ಒಂದು ಬೀಜದಲ್ಲಿ ಸಂಪೂರ್ಣ ಮರ ಅಡಗಿರುವಂತೆ, ಬೀಜಮಂತ್ರದಲ್ಲಿ ಸಂಪೂರ್ಣ ದೈವತತ್ವ ಅಡಗಿದೆ.
೫. ಶಕ್ತಿಃ: ದೇವಕೀನಂದನಃ ಸ್ರಷ್ಟೇತಿ ಶಕ್ತಿಃ: “ದೇವಕೀನಂದನಃ ಸ್ರಷ್ಟಾ”, ಮಂತ್ರದ ಶಕ್ತಿ. ಇಲ್ಲಿ ಕೃಷ್ಣನ ಸೃಷ್ಟಿಶಕ್ತಿ ಸೂಚಿಸಲಾಗಿದೆ.
೬. ಪರಮೋಮಂತ್ರಃ: ಉದ್ಭವಃ, ಕ್ಷೋಭಣೋ ದೇವ ಇತಿ ಪರಮೋಮಂತ್ರಃ: ಇದು ಮಂತ್ರದ ಅತ್ಯುನ್ನತ ಗುಪ್ತ ಶಕ್ತಿರೂಪ. “ಉದ್ಭವ”, ಸೃಷ್ಟಿಕಾರಕ, “ಕ್ಷೋಭಣ”, ಚೇತನೆಯನ್ನು ಉದ್ರೇಕಿಸುವವನು.
೭. ಕೀಲಕಮ್: ಶಂಖಭೃನ್ನಂದಕೀ ಚಕ್ರೀತಿ ಕೀಲಕಮ್. ಇದು ಮಂತ್ರದ “ಕೀಲಕ”. ಕೀಲಕ ಎಂದರೆ ಮಂತ್ರಶಕ್ತಿಯನ್ನು ಬಿಗಿದು ಹಿಡಿದಿರುವ ತಾಳೆ. ಇದನ್ನು ಉಚ್ಚರಿಸುವುದರಿಂದ ಮಂತ್ರದ ಫಲಪ್ರಾಪ್ತಿ ಸುಲಭವಾಗುತ್ತದೆ ಎಂದು ಪರಂಪರೆ. ಮಂತ್ರದ ಶಕ್ತಿ ಸಾಮಾನ್ಯವಾಗಿ “ಗುಪ್ತ” ಅಥವಾ “ಆವೃತ” ಎಂದು ಪರಿಗಣಿಸಲಾಗುತ್ತದೆ. ಆ ಶಕ್ತಿಯನ್ನು ತೆರೆಯುವುದು, ಜಾಗೃತಗೊಳಿಸುವುದು, ಸಾಧಕನೊಂದಿಗೆ ಸಂಪರ್ಕಿಸುವುದು ಇವೇ “ಕೀಲಕ”ದ ಕಾರ್ಯ. ಅಂದರೆ, ಕೀಲಕವು ಮಂತ್ರದ ಫಲಪ್ರಾಪ್ತಿಗೆ ಇರುವ ಅಂತರಾಯವನ್ನು ತೆಗೆಯುವ ಸೂಕ್ಷ್ಮ “unlocking principle”. ಯಾಕೆ “ಶಂಖಭೃತ್ ನಂದಕೀ ಚಕ್ರೀ”? ಇವು ಮಹಾವಿಷ್ಣುನ ಆಯುಧರೂಪ ನಾಮಗಳು: ಶಂಖಭೃತ್ — ಪಂಚಜನ್ಯ ಶಂಖಧಾರಿ, ನಂದಕೀ — ನಂದಕ ಖಡ್ಗಧಾರಿ, ಚಕ್ರೀ — ಸುದರ್ಶನ ಚಕ್ರಧಾರಿ. ಇವು ಕೇವಲ ಆಯುಧಗಳಲ್ಲ; ಪ್ರತಿಯೊಂದೂ ಒಂದು ಆಧ್ಯಾತ್ಮಿಕ ಶಕ್ತಿಯನ್ನು ಸೂಚಿಸುತ್ತದೆ.
1) ಶಂಖ (ನಾದ / ಪ್ರಾಣಜಾಗೃತಿ) ಶಂಖಧ್ವನಿ, ಅಜ್ಞಾನ ನಿವಾರಣೆ, ಪ್ರಾಣಶುದ್ಧಿ, ಧರ್ಮಪ್ರಬೋಧನೆ. ಇದು ಸಾಧಕನ ಒಳಜಾಗೃತಿಯನ್ನು ಆರಂಭಿಸುತ್ತದೆ.
2) ನಂದಕ ಖಡ್ಗವು ಅವಿದ್ಯೆಯನ್ನು ಕಡಿತಮಾಡುವ ಜ್ಞಾನ, ವಿವೇಕಶಕ್ತಿ,. ಅಂದರೆ ಮನಸ್ಸಿನ ಬಂಧನಗಳನ್ನು ಕತ್ತರಿಸುವುದು.
3) ಸುದರ್ಶನ ಚಕ್ರ — ಚೈತನ್ಯ / ಕಾಲ / ರಕ್ಷಣಾ ಶಕ್ತಿ. ಧರ್ಮರಕ್ಷಣೆ, ಅಶುಭ ನಿವಾರಣೆ, ಮನಸ್ಸಿನ ಚಂಚಲತೆಯ ನಾಶ, ದೈವಿಕ ದೃಷ್ಟಿ
ಜಾಗೃತಿ, ಜ್ಞಾನ, ಚೈತನ್ಯರಕ್ಷಣೆ ಶಕ್ತಿಗಳು ಸಾಧಕನಲ್ಲಿ ಮೂಡಿದಾಗ, ಮಂತ್ರದ ನಿಜಶಕ್ತಿ “ತೆರೆಯುತ್ತದೆ”. ಅದರ ಕಾರಣ ಈ ನಾಮಸಮೂಹವನ್ನು “ಕೀಲಕ” ಎಂದು ಹೇಳಿದ್ದಾರೆ. ಕೆಲವು ಆಚಾರ್ಯರ ಪ್ರಕಾರ ಕೀಲಕ ಎಂದರೆ ಮಂತ್ರಫಲಕ್ಕೆ ಕಾರಣವಾಗುವ “ಭಕ್ತಿ”. ಮಂತ್ರವನ್ನು ಕೇವಲ ಉಚ್ಚರಿಸಿದರೆ ಸಾಕಾಗುವುದಿಲ್ಲ. ಮನಸ್ಸು ಶುದ್ಧವಾಗಿರಬೇಕು, ಏಕಾಗ್ರವಾಗಿರಬೇಕು, ದೈವ ಶರಣಾಗತಿಯಾಗಿರಬೇಕು. ವಿಷ್ಣುನ ಆಯುಧಸ್ಮರಣೆ ಮೂಲಕ ಆ ಭಾವನೆ ಮೂಡುತ್ತದೆ.
ಒಂದು ದೊಡ್ಡ ಖಜಾನೆ ಪೆಟ್ಟಿಗೆಯನ್ನು ಕಲ್ಪಿಸಿ: ಬೀಜ = ಖಜಾನೆಯ ಸಾರ, ಶಕ್ತಿ = ಅದರಲ್ಲಿ ಇರುವ ಬಲ, ಕೀಲಕ = ಅದನ್ನು ತೆರೆಯುವ ಕೀಲಿ. ಮಂತ್ರಸಾಧನೆಯಲ್ಲಿ ಕೀಲಕದ ಪಾತ್ರ ಇದೇ ರೀತಿಯದು.
೮. ಅಸ್ತ್ರಮ್: ಶಾರ್ಙ್ಗಧನ್ವಾ ಗದಾಧರ ಇತ್ಯಸ್ತ್ರಮ್: ಇದು ರಕ್ಷಣಾತ್ಮಕ ಅಸ್ತ್ರಶಕ್ತಿ. ಶಾರ್ಙ್ಗಧನ್ವಾ — ಶಾರ್ಙ್ಗ ಬಿಲ್ಲಿನ ಧಾರಿ. ಗದಾಧರ — ಗದೆಯನ್ನು ಧರಿಸಿದವನು
೯. ನೇತ್ರಮ್: ರಥಾಂಗಪಾಣಿರಕ್ಷೋಭ್ಯ ಇತಿ ನೇತ್ರಮ್: ಮಂತ್ರದ ದೈವೀ ದೃಷ್ಟಿ ಅಥವಾ ಜ್ಞಾನಶಕ್ತಿ. ರಥಾಂಗಪಾಣಿಃ “ಕೈಯಲ್ಲಿ ರಥದ ಚಕ್ರವನ್ನು ಹಿಡಿದವನು”. ಚಕ್ರ” ಎಂದರೆ ಕಾಲಚಕ್ರ, ಸಂಸಾರಚಕ್ರ, ಧರ್ಮಚಕ್ರ ಎಂಬ ಅರ್ಥಗಳೂ ಬರುತ್ತವೆ. ಅವನ್ನು ನಿಯಂತ್ರಿಸುವವನು ರಥಾಂಗಪಾಣಿ. ಅಕ್ಷೋಭ್ಯಃ - “ಯಾರನ್ನು ಯಾರೂ ಕದಡಲಾರರೋ", “ಅಚಂಚಲನು”, “ಅವಿಕಾರಸ್ವರೂಪಿ”. ಕ್ಷುಭ್ (क्षुभ्) ಎಂಬ ಧಾತುವಿನಿಂದ ಬಂದಿದೆ. ಅಕ್ಷೋಭ್ಯ = ಅಚಲ, ಅಚಂಚಲ. ಭಗವಂತನು ಸುಖದಿಂದಲೂ ಅಲ್ಲ, ದುಃಖದಿಂದಲೂ ಅಲ್ಲ, ಸೃಷ್ಟಿಯಿಂದಲೂ ಅಲ್ಲ, ಪ್ರಳಯದಿಂದಲೂ ಅಲ್ಲ ಯಾವುದರಿಂದಲೂ ವ್ಯಾಕುಲಗೊಳ್ಳುವುದಿಲ್ಲ.
೧೦. ಕವಚಮ್: ತ್ರಿಸಾಮಾಸಾಮಗಃ ಸಾಮೇತಿ ಕವಚಮ್, ಮಂತ್ರದ ಕವಚ. ವೇದಸಾಮಗಾನ ರೂಪಿಯಾದ ವಿಷ್ಣು ಭಕ್ತನಿಗೆ ಕವಚವಾಗಿ ರಕ್ಷಣೆ ನೀಡುತ್ತಾನೆ. ವೇದಗಳಲ್ಲಿ ಪ್ರಸಿದ್ಧವಾದ ಮೂರು ಪ್ರಮುಖ ಸಾಮಗಳು: ಬೃಹತ್‌ಸಾಮ, ರಥಂತರಸಾಮ, ವಾಮದೇವ್ಯಸಾಮ, ಇವುಗಳ ಮೂಲಕ ಸ್ತುತಿಸಲ್ಪಡುವ ಪರಮಾತ್ಮನು “ತ್ರಿಸಾಮಾ”. ಜಾಗ್ರತ್, ಸ್ವಪ್ನ, ಸುಷುಪ್ತಿ ಈ ಮೂರು ಸ್ಥಿತಿಗಳಲ್ಲಿಯೂ ಪ್ರಕಾಶಿಸುವ ಚೈತನ್ಯ “ತ್ರಿಸಾಮಾ”. ತ್ರಿಸಾಮಾ = ಮೂರು ಪ್ರಮುಖ ಸಾಮಗಳಿಂದ ಸ್ತುತಿಸಲ್ಪಡುವ ಪರಮಾತ್ಮ, ಸಾಮಗಃ = ಸಾಮಗಾನ ರೂಪದಲ್ಲಿ ವ್ಯಕ್ತವಾಗುವವನು, ಸಾಮ = ಸಾಮವೇದಸ್ವರೂಪಿ, ಶಾಂತಮಯ ಬ್ರಹ್ಮಸ್ವರೂಪಿ.
೧೧. ಯೋನಿಃ ಆನಂದಂ ಪರಬ್ರಹ್ಮೇತಿ ಯೋನಿಃ: ಮಂತ್ರದ ಮೂಲತತ್ವ: “ಆನಂದಸ್ವರೂಪ ಪರಬ್ರಹ್ಮ”.
೧೨. ದಿಗ್ಬಂಧಃ: ಋತುಸ್ಸುದರ್ಶನಃ ಕಾಲ ಇತಿ ದಿಗ್ಬಂಧಃ: ಎಲ್ಲ ದಿಕ್ಕುಗಳಲ್ಲೂ ರಕ್ಷಣೆಯನ್ನು ಸ್ಥಾಪಿಸುವ ಭಾಗ. ಋತುಃ — ಕಾಲಚಕ್ರ ನಿಯಂತ್ರಕ, ಸುದರ್ಶನಃ - ದಿವ್ಯ ಚಕ್ರಧಾರಿ, ಕಾಲಃ - ಕಾಲಸ್ವರೂಪಿ
೧೩. ಧ್ಯಾನಮ್: ಶ್ರೀವಿಶ್ವರೂಪ ಇತಿ ಧ್ಯಾನಮ್: ವಿಷ್ಣುನ ವಿಶ್ವರೂಪವನ್ನು ಧ್ಯಾನಿಸಬೇಕು.
೧೪. ವಿನಿಯೋಗಃ: ಶ್ರೀ ಮಹಾವಿಷ್ಣು ಪ್ರೀತ್ಯರ್ಥೇ ಸಹಸ್ರನಾಮ ಜಪೇ ಪಾರಾಯಣೇ ವಿನಿಯೋಗಃ: “ಶ್ರೀ ಮಹಾವಿಷ್ಣುವಿನ ಪ್ರೀತಿಗಾಗಿ ಈ ಸಹಸ್ರನಾಮ ಜಪ ಮತ್ತು ಪಾರಾಯಣವನ್ನು ಮಾಡುತ್ತೇನೆ” ಎಂಬ ಸಂಕಲ್ಪ.
Comments
Post a Comment