ಜೋಗದ ಸಿರಿ ಬೆಳಕಿನಲ್ಲಿ : ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ….
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…
ಜೋಗದ ಸಿರಿ ಬೆಳಕಿನಲ್ಲಿ: ಜೋಗದ “ಸಿರಿ ಬೆಳಕು”, ಶ್ರೀಮಂತ ಪ್ರಕಾಶ ಎಲ್ಲರನ್ನೂ ಆಕರ್ಶಿಸಿ, ಕರ್ನಾಟಕವನ್ನ ಪ್ರಸಿದ್ದಗೊಳಿಸಿದೆ ಅದರಿಂದ ಹೊಮ್ಮುತ್ತಿರುವ ಬೇಳಕು ಎಲ್ಲೆಡೆ ಹರಡಿದೆ.
ತುಂಗೆಯ ತೆನೆ ಬಳುಕಿನಲ್ಲಿ: ತುಂಗಾ ನದಿಯ ತುದಿಗಳ ತಿರುಗುವಿಕೆಯ ಚೈತನ್ಯದಿಂದ ನಲಿಯುತ್ತಿರುದರಿಂದ. ಎಲ್ಲೆಡೆ ದಾನ್ಯಗಳ ರಾಷಿಯನ್ನು ಹುಟ್ಟುಹಾಕುತ್ತಿದ್ದಾಳೆ ತಾಯಿ. ತನ್ನ ಮಕ್ಕಳನ್ನು ಕಾಪಾಡುತ್ತಿದ್ದಾಳೆ ತಾಯಿ.
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ: ಸಹ್ಯಾದ್ರಿಯ (ಲೋಹಗಳಂತೆ ಬೆಳೆದಿರುವ) ಮಹತ್ ಬೆಟ್ಟಗಳ ಸಮೃದ್ದ ಲೋಹ (metals) ಅದಿರುಗಳ (ores) ಕೊಡುವಿಕೆಯಿಂದ/ಕೂಡುವಿಕೆಯಿಂದ ತನ್ನ ಮಕ್ಕಳಿಗೆ ನೆರವಾಗಿದ್ದಾಳೆ.
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ: ನಿತ್ಯವೂ ನೂತನ ಹಸಿರು ಬಣ್ಣದಿಂದ ತುಂಬಿದ ತೇಗ ಹಾಗು ಗಂಧದ ಮರಗಳಿಂದ ತುಂಬಿ, ತನ್ನ ಮಕ್ಕಳ ಸಂಪತ್ತನ್ನು ಹೆಚ್ಚಿಸಿದ್ದಾಳೆ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…: ತಾಯಿ, ಕ್ರರ್ನಾಟಕ ಮಾತೆಯೇ, ನಿನಗೆ ಆರಾಧನೆಯಂತೆ ನಿನ್ನ ನಿಸರ್ಗ ನಿನಗೆ ನಿತ್ಯ ಉತ್ಸವದಂತೆ ಅಲಂಕೃತವಾಗಿ ಸಂಭ್ರಮಿಸುತ್ತಿದೆ
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ: ಹೇಗೆ ಬೆಂಕಿಯಿದ್ದಲ್ಲಿ ಹೊಗೆ ಇರುತ್ತದೆಯೊ, ಹೇಗೆ ಹಸಿರಿದ್ದಲ್ಲಿ ಹಿಮವಿರುತ್ತದೆಯೊ ಹಾಗೆಯೆ ಅವಳ ಇತಿಹಾಸದ ಬುಡದಿಂದ ಚರಿತ್ರೆಯು ಹಿಮವಾಗಿ ಸದಾ ಕಾಣುತ್ತದೆ. ಹೇಗೆ ಹಿಮ ಬೆಟ್ಟಕ್ಕೆ ಅಲಂಕಾರವಾಗಿರುತ್ತೋ ಹಾಗೆಯೇ ನಿನ್ನ ಅದ್ಭುತವಾದ ಕೊರಳಿಗೆ ಹೂವಿನ ಮಾಲೆಯಂತೆ, ರಾಜಮನೆತನಗಳಿಂದ ಕೂಡಿದ ಇತಿಹಾಸದ ಹಿಮ ನಿನ್ನನ್ನು ಅಲಂಕರಿಸಿದೆ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ: ನಮ್ಮ ಆದಿಯಿಂದ ಬಂದಿರುವ ಅನೇಕಾನೇಕ ಶಾಸನಗಳ ಸಾಲುಗಳು ನಮ್ಮ ಪೂರ್ವಜರು ಮಾಡಿದ ಸಾಹಸಗಳನ್ನು ಹೆಮ್ಮೆಯಿಂದ ಡಂಗೂರ ಹೊಡೆಯುತ್ತಿದೆ
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ: ನಮ್ಮ ಸಾಹಿತ್ಯದ ಸಿರಿ ಸಂಪತ್ತು ಓಲೆಗರಿಯಲ್ಲಿ ಮಿಂಚುತ್ತಿದ್ದರೆ, ನಮ್ಮ ದೆವಾಲಯಗಳ ಗೋಡೆಗಳೂ ಕೂಡ ಇತಿಹಾಸಕ್ಕೆ ಕನ್ನಡಿಯಾಗಿ ನಿಂತಿವೆ
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ….: ತಾಯಿ, ಕ್ರರ್ನಾಟಕ ಮಾತೆಯೇ, ನಿನಗೆ ಆರಾಧನೆಯಂತೆ ನಿನ್ನ ಇತಿಹಾಸ ನಿನಗೆ ನಿತ್ಯ ಉತ್ಸವದಂತೆ ಅಲಂಕಾರವಾಗಿ ಸಂಭ್ರಮಿಸುತ್ತಿದೆ
ಹಲವೆನ್ನದ ಹಿರಿಮೆ: ನಿನ್ನ ವೈವಿದ್ಯತೆಯ (ಜನ, ಊಟ, ವಿಚಾರ, ಸಾಹಿತ್ಯ, ಜಿಲ್ಲೆಗಳು, ಹಳ್ಳಿಗಳು ಇತ್ಯಾದಿ) ಸಿರಿ ವರ್ಣಿಸಲು ಸಾಧ್ಯವಾಗದಷ್ಟಿವೆ, ಎಷ್ಟೇ ಇದ್ದರೂ ಆ ಸಿರಿಯನ್ನು ಡಂಭದಿಂದ ಕೊಚ್ಚುಕೊಳ್ಲದೆಯೇ, ಎಷ್ಟೇ ಹಿರಿಮೆಯಿದ್ದರೂ ಅದರ ಬಗ್ಗೆ ಹೇಳಿಕೊಳ್ಳದೆಯೇ ಗಂಭೀರವಾಗಿರುವ ನಮ್ಮ ತಾಯಿ
ಕುಲವೆನ್ನದ ಗರಿಮೆ: ಎಷ್ಟೋ ಕುಲಗಳಿದ್ದರೂ ಯಾರನ್ನೂ ಮೇಲು ಕೀಳಾಗಿ ನೋಡದೆಯೆ, ಎಲ್ಲರಿಗೂ ಸಮಾನವಾಗಿ ಕೊಡುವ ನಮ್ಮ ತಾಯಿ, ಅವಳ ಗರಿಮ, ಗಾಂಭೀರ್ಯ ಅಚ್ಚರಿಯುಂಟುಮಾಡುತ್ತದೆ
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ: ತಾನು ಸದಾ ಎಲ್ಲರನ್ನು, ಎಲ್ಲವನ್ನೂ ಸ್ವಾಗತಿಸಿ ಬೆಳೆದು ನಿಂತಿದ್ದಾಳೆ. ಸದಾ ಸದ್-ವಿಕಾಸದ ಒಂದು ಚರಿತ್ರೆಯನ್ನು ಹೊಂದಿರುವ ನಮ್ಮ ತಾಯಿ, ನಮ್ಮ ನುಡಿಯು ಎಲ್ಲಾ ಕಡೆಯಿಂದಲೂ ಮೌಲ್ಯಪೂರ್ಣ ವಿಚಾರಗಳನ್ನು ಸ್ವೀಕರಿಸಿ ಬೆಳೆದಿದ್ದಾಳೆ. ಅವಳನ್ನು ನಂಬಿ ಬಂದ ಎಲ್ಲರ ಕೈಯನ್ನೂ ಹಿಡಿದು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದಾಳೆ. ಸೀಮೆಯೇ ಇಲ್ಲದೆಯೇ, ಗಡಿಯೇ ಇಲ್ಲದೆಯೇ ಲೋಕವನ್ನೇಲ್ಲಾ ಆವರಿಸಿದ್ದಾಳೆ (ಅವಳ ಮಕ್ಕಳು ಎಲ್ಲೆಡೆ ಹೋಗಿ ಅವಳ ಗರಿಮೆಯನ್ನು ಹೆಚ್ಚಿಸುತ್ತಿದ್ದಾರೆ). ಇದನ್ನು ಲೋಕಾಮೃತ ಎಂದರೂ ಸರಿಯೇ.
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆ: ಈ ತನ್ನ ಕನ್ನಡ ವತ್ಸರಲ್ಲಿ (ಮಕ್ಕಳಲ್ಲಿ) ಮತ್ಸರ ಬಾರದಂತೆ, ಉದಾರ ಮನಸನ್ನು ಬೆಳೆಸಿರುವ ಚರಿತ್ರೆ ಈ ನಾಡಿನ ಮಹಿಮೆ, ಈ ಗಾಂಭೀರ್ಯ ಇವಳದ್ದು
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ….: ತಾಯಿ, ಕ್ರರ್ನಾಟಕ ಮಾತೆಯೇ, ನಿನಗೆ ಆರಾಧನೆಯಂತೆ ನಿನ್ನ ಚರಿತ್ರೆ, ನಿನ್ನ ಹಿರಿಮೆ, ನಿನ್ನ ಗರಿಮೆ, ನಿನ್ನ ಮಹಿಮೆಯನ್ನು ನಿನಗೆ ನಿತ್ಯ ಉತ್ಸವದಂತೆ ಅಲಂಕಾರವಾಗಿಸಿ ಸಂಭ್ರಮಿಸುತ್ತಿದೆ
Comments
Post a Comment