Friday, July 7, 2023

Sri Sathyanarana Vratha katha

 ಶ್ರೀ ಸತ್ಯನಾರಾಯಣ ದೇವರ ಕಥೆ.

Quiz: 

  1. Who first spoke of Sri Sathyanarayana vratha and to who? Vishnu – Narada – sutapuraNika
  2. Who is speaking the vratha kathe? sutapurANika
  3. Who is suta-purANika? Ugrasrava Sauti, son of Romaharshana, also called Sūta, is the narrator of several purANAs. Suta was Vedavyasa’s disciple and the great sage Romaharshana’s son. All the sages used to go and ask Suta to recite purANAs to them. Suta had learned the purANAs that Narada had recited to the Sanatkumaras. 
  4. Where is this spoken? naimishAraNya. naimisha means that which is transient, that which is momentary. Shounaka and several other sages performed meditation (tapasya) there
  5. Who are listening to the vratha kathe? Shaunaka and other rishis. The goal of these rishis was to provide formule for attaining the purushArtha to the society. So, they would ask questions for the entire humanity. 
  6. Where can the story of sathyanarayana vrata be found? Some say Skanda and some say bhavishya. It is not clear. I have searched both but could not find references. 
  7. When can one perform Sathanarayana vratha? Any day. Any time. In any condition? 
  8. What is the prasadam for Sri Sathyanarana vratha called? Whare its ingredients? It is called sapAdabhakshya, and it has rave, sakkare, haalu, thuppa and baaLehaNNu. 

There are 5 chapters in the vratha katha: 

  • Chapter 1: origins and the process of this vrata – how Narada went and asked Sri Vishnu for the easiest of all vrathas following which our purushArtha can be realized 
  • Chapter 2: Fruits of the vratha - “ananyAschintayanto mAm e janAh pariupAsate tEShAm nityAbhiyuktAnAm yOgakshEmam vahAmyaham”. – a brahmaNa gets what he wants and a wood cutter gets what he wants. 
  • Chapter 3: sticking to the sankalpa – your promise. When a promise is broken, the assurance is also broken. It is like missing the insurance premium – you lose the coverage. 
  • Chapter 4: Honoring the prasAdam even by mistake is a fault. There are consequences to it. So, honor your prasadam. 
  • Chapter 5: not taking it too lightly: Sri SathyanArayaNa pooje when done even playfully has its results. It is not to be taken lightly. 

The fruits of Sri Sathyanarayana vratha are non different from the phalasruthi of Sri Vishnusahasranama

ya idaṁ śṛṇuyānnityaṁ yaścāpi parikīrtayet, nāśubhaṁ prāpnuyāt kiñcit sōmutreha ca mānavaḥ. 

vedāntagō brāhmaṇaḥ syāt kṣatriyō vijayī bhavet, vaiśyo dhanasamṛddhaḥ syācchūdraḥ sukhamavāpnuyāt

vedāntagō brāhmaṇaḥ syāt kṣatriyō vijayī bhavet, vaiśyo dhanasamṛddhaḥ syācchūdraḥ sukhamavāpnuyāt

bhaktimān yaḥ sadōtthāya śucistadgatamānasaḥ, sahasraṁ vāsudevasya nāmnāmetat rakīrtayet

yaśaḥ prāpnōti vipulaṁ yāti prādhānyameva ca, acalāṁ śriyamāpnōti śreyaḥ prāpnōtyanuttamam

na bhayaṁ kvacidāpnōti vīryaṁ tejaśca viṁdati, bhavatyarōgō dyutimān balarūpaguṇānvitaḥ

rōgārtō mucyate rōgādbaddhō mucyeta bandhanāt, bhayānmucyeta bhītastu mucyetāpanna āpadaḥ

durgāṇyatitaratyāśu puruṣaḥ puruṣōttamam, stuvannāmasahasreṇa nityaṁ bhaktisamanvitaḥ

vāsudevāśrayō martyō vāsudevaparāyaṇaḥ, sarvapāpaviśuddhātmā yāti brahma sanātanam


೧ನೇ ಅಧ್ಯಾಯ: origins and the process of the vratha 

ನೈಮಿಷ್ಯವೆಂಬ ಅರಣ್ಯದಲ್ಲಿ ಪುರಾಣಗಳನ್ನು ಬಲ್ಲ ಸೂತಪುರಾಣಿಕನನ್ನು ಕುರಿತು ಒಂದು ದಿನ ಮಾನವರ ಹಿತಾರ್ಥವಾಗಿ ಪ್ರಶ್ನಿಸಿದರು: “ಮಾನವರ ಮನೋಬಯಕೆಗಳು ಅದಾವ ವ್ರತದಿಂದ ಇಲ್ಲವೇ ಅದಾವ ತಪಸ್ಸಿನಿಂದ ಈಡೇರುವುವು?' 

ಸೂತನು ಅದಕ್ಕೆ: “ಇದೇ ಪ್ರಶ್ನೆಯನ್ನು ಮೊದಲು ನಾರದ ಮಹರ್ಷಿಯು ಶ್ರೀಮನ್ನಾರಾಯಣನನ್ನು ಕೇಳಿದನು. ಅದಕ್ಕೆ ಲೋಕ ರಕ್ಷಕನಾದ ಆ ಭಗವಂತನು, ನಾರದರಿಗೆ ಕೊಟ್ಟ ಉತ್ತರವನ್ನೇ ಈಗ ಹೇಳುವೆನು. 

ಒಂದು ಸಲ ನಾರದರು ಈ ಮೃತ್ಯು ಲೋಕಕ್ಕೆ ಬಂದರು. ಬಹು ದುಃಖದಿಂದ ಬಳಲುತ್ತಿರುವುದನ್ನು ಕಂಡರು. ಬೆಣ್ಣೆಯಂತಹ ಹೃದಯ ಕರಗಿತು. ಅದಾವ ಉಪಾಯದಿಂದ ಈ ಜನರ ದುಃಖವು ದೂರವಾಗುವುದು? ಎಂದು ಮನಮುಟ್ಟಿ ಚಿಂತಿಸಿದರು. ಶ್ರೀಮನ್ನಾರಾಯಣನನ್ನು ಕಾಣಲು ವಿಷ್ಣುಲೋಕಕ್ಕೆ ತೆರಳಿದರು. 

ನಾರದರ ಪರಹಿತ ಭಾವಪೂರ್ಣವೂ ಆದ ಸ್ತೋತ್ರಗಳನ್ನು ಕೇಳಿ ಶ್ರೀ ವಿಷ್ಣುವು “ವತ್ಸ ನಾರದಾ, ಜನರ ಮೇಲೆ ಅನುಗ್ರಹ ಮಾಡಬೇಕೆಂಬ ಬಯಕೆಯಿಂದ ಒಳ್ಳೆಯ ಪ್ರಶ್ನೆಯನ್ನು ಕೇಳಿದೆ. ಏನು ಮಾಡುವುದಂತ ದುಃಖ ಮುಕ್ತರಾಗುವರೆಂಬುದನ್ನು ಹೇಳುವೆ. ಕೇಳು. ಅದೊಂದು ಮಹತ್ಪುಣ್ಯಕರವಾದ ಸತ್ಯನಾರಾಯಣ ವ್ರತವು. ಅದು ಸ್ವರ್ಗ ಮೃತ್ಯುಲೋಕದಲ್ಲಿ ದುರ್ಲಭವಾದುದು. ಅದನ್ನು ಒಳ್ಳೆಯ ವಿಧಾನಪೂರ್ವಕವಾಗಿ ಮಾಡುವುದರಿಂದ ಇಹದಲ್ಲಿನ ದುಃಖವೆಲ್ಲಾ ನಾಶವಾಗಿ ಸುಖ ಉಂಟಾಗುವುದು ಮತ್ತು ಮುಂದೆ ಮರಣಾನಂತರ ಮೋಕ್ಷವನ್ನು ಹೊಂದುವನು”

ಭಗವಂತನ ಮಾತುಗಳನ್ನು ಕೇಳಿ ನಾರದ ಮಹರ್ಷಿಯು 'ಕೀ ಫಲಂ ಕಿಂ ವಿಧಾನಂ ಚ ಕೃತಂ ಕೇನ್ವರ ತವ ವ್ರತಂ'. ಈ ವ್ರತಕ್ಕೆ ಫಲವೆನಿದೆ? ಇದನ್ನು ಮಾಡುವ ವಿಧಾನ ಹೇಗೆ? ಮೊದಲು ಯಾರು ಇದನ್ನು ಮಾಡಿದ್ದರು? ಮತ್ತು 'ಕದಾ ಕಾರ್ಯಂ ದ ವ್ರತಂ' ವ್ರತ ಮಾಡಲಿಕ್ಕೆ ಕಾಲವು ಯಾವುದು? ಇದನ್ನು ವಿಸ್ತಾರವಾಗಿ ಹೇಳಬೇಕೆಂದು ಕೇಳಿದನು. 

ಅದಕ್ಕೆ ಭಗವಂತನು - 'ಈ ವ್ರತಾಚರಣೆಯಿಂದ ದುಃಖಗಳೆಲ್ಲಾ ನಾಶವಾಗುವುದು. ಧನ ಮತ್ತು ಧಾನ್ಯಗಳು ಸಮೃದ್ಧಿಯಾಗುವುದು. ಅಲ್ಲದೇ 'ಸೌಭಾಗ್ಯಂ ಸಂತತಿಕರಂ ಸರ್ವತ್ರ ವಿಜಯ ಪ್ರದಂ. ಸೌಭಾಗ್ಯವನ್ನು, ಸಂತತಿಯನ್ನು ಕೊಡುವುದು. ಎಲ್ಲಾ ಕಾರ್ಯಗಳಲ್ಲೂ ಗೆಲುವೇ ದೊರಕುವುದು. ಇದೇ ಈ ವ್ರತದಿಂದ ದೊರಕುವ ಫಲಗಳು.

ಯಾವ ಕಾಲ, ಯಾವ ದಿನದಲ್ಲಾದರೂ ಶ್ರದ್ಧೆ, ಭಕ್ತಿಯಿಂದ ಮಾಡಬಹುದು. ಉತ್ತಮವಾದ ಸಪಾತಪಕ್ಷ ನೈವೇದ್ಯವನ್ನು ಭಕ್ತಿಯಿಂದ ಕೊಡಬೇಕು. ಭಕ್ಷ್ಯವೆಂದರೆ ಬಾಳೆಹಣ್ಣು, ತುಪ್ಪ, ಹಾಲು ಮತ್ತು ಗೋಧಿಯ ಸಜ್ಜಿಗೆ ದೊರೆಯದಿದ್ದಲ್ಲಿ ಅಕ್ಕಿಯ ಸಜ್ಜಿಗೆಯನ್ನೂ ಸಕ್ಕರೆ ದೊರೆಯದಿದ್ದಲ್ಲಿ ಬೆಲ್ಲವನ್ನೂ ಅಭಾವಶಾಲಿ ಚೂರ್ಣಂ ಯಾ ಚರ್ಕಣ ಚ ಡಸ್ತಬಾ' ಉಪಯೋಗಿಸಬೇಕು. ಅನಂತರ ತನ್ನ ಆಪ್ತೇಷ್ಠರುಗಳಿಂದ ಕೂಡಿ ಊಟಕ್ಕೆ ಹಾಕಿ ತಾಂಬೂಲ ದಕ್ಷಿಣೆಗಳನ್ನು ಕೊಡಬೇಕು. ಇಂತು ವ್ರತವನ್ನು ಆಚರಿಸಿದರೆ, ಮನುಜನ ಮನೋರಥವು ಸಿದ್ಧಿಸುವುದು. ವಿಶೇಷವಾಗಿ ಈ ವ್ರತವು ಕಲಿಯುಗದಲ್ಲಿ ಬಹು ಬೇಗನೆ ಫಲವನ್ನು ಕೊಡುವಂತಹದಾಗಿದೆ. ಹೀಗೆಂದು ಭಗವಂತನು ನಾರದರಿಗೆ ಹೇಳಿದನು. ಇದೇ ಶ್ರೀ ಸ್ಕಂದ ಪುರಾಣ ರೇವಾ ಖಂಡದ ಸತ್ಯನಾರಾಯಣ ಕಥಾಯೋ ಪ್ರಥಮಾಧ್ಯಾಯಂ ಸಮಾಪ್ತಿರಸ್ತು.


೨ನೇ ಅಧ್ಯಾಯ: dharmArthi prApnuyAt dharmam arthArthi 

ಸೂತಪುರಾಣಿಕನು ಋಷಿಗಳನ್ನು ಕುರಿತು 'ಕಾಶಿ ಯಲ್ಲಿ ಒಬ್ಬ ದರಿದ್ರ ಬ್ರಾಹ್ಮಣ ಇದ್ದ. ಹಸಿವೆ, ನೀರಡಿಕೆಗಳಿಂದ ಪೀಡಿತನಾಗಿದ್ದನು. ದಿನವೂ ಭಿಕ್ಷೆಗಾಗಿ ಸಂಚರಿಸುತಿದ್ದ. ಬ್ರಾಹ್ಮಣನ ದೀನತೆಯನ್ನು ಕಂಡ ಭಗವಂತನು ಬ್ರಾಹ್ಮಣ ರೂಪದಲ್ಲಿ ಬಂದು “ಸತ್ಯನಾರಾಯಣನನ್ನು ಭಕ್ತಿಪೂರ್ವಕವಾಗಿ ಪೂಜಿಸು. ಇದೊಂದು ಮೇಲಾದ ವ್ರತವು. ಈ ವ್ರತಾಚರಣೆಯಿಂದ ಮಾನವನ ಎಲ್ಲಾ ಬಗೆಯ ದುಃಖಗಳಿಂದ ಕೂಡಲೇ ಮುಕ್ತನಾಗುವನು” ಎಂದು ನುಡಿದು ಆ ವ್ರತದ ವಿಧಿ ವಿಧಾನಗಳನ್ನು ತಿಳಿಸಿ ಬ್ರಾಹ್ಮಣನ ರೂಪವನ್ನು ಕಳೆದು ಸತ್ಯನಾರಾಯಣನು ಅಲ್ಲಿಯೇ ಅಂತರ್ಧಾನನಾದನು.

ಆಗ ಬ್ರಾಹ್ಮಣನು ಶ್ರೀ ಸತ್ಯನಾರಾಯಣ ವ್ರತವನ್ನು ಮಾಡಿಯೇ ತೀರುವೆನು ಎಂದು ಮನಸ್ಸಿನಲ್ಲಿ ನಿಶ್ಚಯಿಸಿದನು. ಬಡತನದಿಂದ ಪಾರಾಗಿ ಸುಖವುಂಟಾಗುವ ಕರ್ಮದ ಚಿಂತನೆಯಿಂದ ಆತನಿಗೆ ರಾತ್ರಿಯಲ್ಲಿ ನಿದ್ರೆ ಬರಲಿಲ್ಲ. ಮರುದಿನ ಬೆಳಗಾಯಿತು. ಬ್ರಾಹ್ಮಣನು ಕೂಡಲೇ ಹಾಸಿಗೆಯಿಂದ ಮೇಲೆದ್ದನು. ಆ ಹೊತ್ತು ತಾನು ಸತ್ಯನಾರಾಯಣನ ವ್ರತವನ್ನು ಮಾಡುವೆನೆಂದು ನಿಶ್ಚಯಿಸಿದನು. ಹಾಗೆಂದು ಸಂಕಲ್ಪ ಮಾಡಿಕೊಂಡನು. ಪ್ರಾತಃವಿಧಿಗಳನ್ನು ಮುಗಿಸಿ ಭಿಕ್ಷೆಗಾಗಿ ಹೊರಟನು. ಅಂದು ಆ ಬ್ರಾಹ್ಮಣನಿಗೆ ದೈವವಶಾತ್ ಪ್ರತಿನಿತ್ಯಕ್ಕಿಂತಲೂ ಹೆಚ್ಚಿನ ಭಿಕ್ಷೆಯು ದೊರಕಿತು. ಆಗ ಆತನು ಸಂತುಷ್ಟಚಿತ್ತನಾಗಿ ಬಂಧುಬಾಂಧವರೊಡನೆ ಕೂಡಿಕೊಂಡು ಶ್ರೀ ಸತ್ಯನಾರಾಯಣ ವ್ರತವನ್ನು ನೆರವೇರಿಸಿದನು. ಅಂದು ಮಾಡಿದ ವ್ರತದ ಪ್ರಭಾವದಿಂದ ಆ ಬ್ರಾಹ್ಮಣನು ಎಲ್ಲಾ ದುಃಖಗಳಿಂದ ವಿಮುಕ್ತನಾದನು ಮತ್ತು ಎಲ್ಲಾ ಸುಖ ಸಂಪತ್ತುಗಳನ್ನು ಹೊಂದಿದನು. 

ವ್ರತದ ಪ್ರಭಾವವನ್ನು ಮನಗಂಡ ಆ ಬ್ರಾಹ್ಮಣನು ಆ ದಿನದಿಂದ ಪ್ರತೀ ತಿಂಗಳಲ್ಲೂ ಆ ಉತ್ತಮ ವ್ರತವನ್ನು ತಪ್ಪದೇ ಮಾಡತೊಡಗಿದನು. ಆತನ ಸಂಚಿತ ಪಾಪಗಳೆಲ್ಲವೂ ಸುಟ್ಟುಹೋದವು. ಕೊನೆಗೆ ಆತನು ದುರ್ಲಭವಾದ ಮೋಕ್ಷವನ್ನು ಹೊಂದಿದನು. 

ಹಾಗೆಂದು ಭಗವಂತನು ನಾರದರಿಗೆ ಹೇಳಿ, ಜನರ ದುಃಖದ ನಿವೃತ್ತಿಗೆ ಸುಖ ಪ್ರಾಪ್ತಿಗೆ ಈ ಸತ್ಯನಾರಾಯಣ ವ್ರತವೇ ಉತ್ತಮ ಉಪಾಯವೆಂದು ಹೇಳಿದನು.' ಎಂದು ಸೂತಪುರಾಣಿಕನು ನುಡಿದನು.

ಆಗ ಆ ಋಷಿಗಳು ಎಲ್ಲಾ ಸಂಗತಿಗಳನ್ನು ವಿಸ್ತರಿಸಿ ಹೇಳಬೇಕೆಂದು ನುಡಿದರು. ಋಷಿಗಳ ಪ್ರಶ್ನೆಯನ್ನು ಕೇಳಿ ಸೂತಪುರಾಣಿಕನು “ಈ ವ್ರತವನ್ನು ಯಾರು ಮಾಡಿದ್ದಾರೆಂಬುದನ್ನು ಹೇಳುತ್ತೇನೆ ಕೇಳಿರಿ!'

ಮೊದಲು ದರಿದ್ರನಾಗಿದ್ದ ಬ್ರಾಹ್ಮಣನು ತನ್ನ ಐಶ್ವರ್ಯಾನುಸಾರವಾಗಿ ಬಾಂಧವರಿಂದ ಕೂಡಿ ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಮಾಡತೊಡಗಿದನು. ಒಬ್ಬ ಕಟ್ಟಿಗೆ ಹೊರೆಯನ್ನು ಮಾರುವವನು ಆ ಬ್ರಾಹ್ಮಣನ ಮನೆಯ ಬಾಗಿಲಿಗೆ ಬಂದನು. ನೀರಡಿಕೆಯಿಂದ ಪೀಡಿತನಾಗಿ ಆ ಬ್ರಾಹ್ಮಣನ ಮನೆಯ ಒಳಕ್ಕೆ ಹೋದನು. ಅಲ್ಲಿ ಆತನು ಮಾಡುತ್ತಿರುವ ಶ್ರೀ ಸತ್ಯನಾರಾಯಣ ವ್ರತವನ್ನು ನೋಡಿದನು. ಆಗ ಆತನಲ್ಲಿ ಭಕ್ತಿ ಅಂಕುರಿಸಿತು. ನಮಸ್ಕರಿಸಿದನು. ಪೂಜೆ ಮಾಡುತ್ತಿರುವ ಬ್ರಾಹ್ಮಣನನ್ನು ಕುರಿತು “ನೀನು ಇದನ್ನೇನು ಮಾಡಲಾರಂಭಿಸಿರುವೆ? ಮತ್ತು ಇದನ್ನು ಮಾಡುವುದರಿಂದ ದೊರೆಯುವ ಫಲವನ್ನು ಇದನ್ನೆಲ್ಲಾ ನನ್ನ ಮುಂದೆ ವಿಸ್ತಾರವಾಗಿ ಹೇಳು” ಎಂದು ಬೇಡಿಕೊಂಡನು. 

ಬ್ರಾಹ್ಮಣನು “ಎಲ್ಲರ ಮನೋರಥಗಳನ್ನು ಪೂರ್ಣಮಾಡಿಕೊಡುವಂತಹ ಶ್ರೀ ಸತ್ಯನಾರಾಯಣ ವ್ರತಾನ್ನು ನಾನು ಹೇಳುತಲಿರುವೆ. ಮೊದಲು ಅಷ್ಟ ದರಿದ್ರನಾದ ನನಗೆ ಈ ವ್ರತದ ಪ್ರಭಾವದಿಂದ ಈಗ ಧನ ಧಾನ್ಯ ಮುಂತಾದ ಸಿರಿಗಳೆಲ್ಲವೂ ದೊರಕಿದೆ ಎಂದನು”. ನಂತರ ಕಟ್ಟಿಗೆ ಹೊರೆ ಮಾರುವವನು ಆ ಬ್ರಾಹ್ಮಣನ ಮುಖದಿಂದ ಆ ವ್ರತದ ವಿಧಿ ವಿಧಾನಗಳನ್ನು ತಿಳಿದುಕೊಂಡನು. ಸಂತೋಷದಿಂದ ಶ್ರೀ ಸತ್ಯನಾರಾಯಣನ ಪ್ರಸಾದವನ್ನು ತಿಂದನು. ನೀರು ಕುಡಿದನು. ಊಟ ಮಾಡಿ ತನ್ನ ಊರಿಗೆ ಹೊರಟು ಹೋದನು. ಅನಂತರ ಅವನು ಶುದ್ಧ ಮನಸ್ಸಿನಿಂದ ಶ್ರೀ ಸತ್ಯನಾರಾಯಣ ದೇವನನ್ನು ಸ್ಮರಿಸಿ ಕಟ್ಟಿಗೆ ಹೊರೆಯನ್ನು ಮಾರಿಬಂದ ಹಣವನ್ನು ವೆಚ್ಚಮಾಡಿ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸುವೆನು ಎಂದು ಮನಮುಟ್ಟಿ ನಿರ್ಧರಿಸಿದನು.

ಅದೇ ನಿರ್ಧಾರಮನದಿಂದಲೇ ಕಟ್ಟಿಗೆ ಹೊರೆಯನ್ನು ಹೊತ್ತುಕೊಂಡು ಹೊರಟನು. ಅಂದು ಆತನಿಗೆ ದಿನಕ್ಕಿಂತ ಎರಡು ಪಟ್ಟು ಹೆಚ್ಚು ಹಣವು ಸಿಕ್ಕಿತು. ಪ್ರಸಾದಕ್ಕೆ ಬೇಕಾಗುವ ಬಾಳೆಹಣ್ಣು, ತುಪ್ಪ, ಸಕ್ಕರೆ, ಹಾಲು ಮತ್ತು ಗೋಧಿಯ ಸಜ್ಜಿಗೆಯನ್ನು ಕೊಂಡು ಪ್ರಸಾದವನ್ನು ಮಾಡಿದನು. ತನ್ನ ಬಂಧು ಬಾಂಧವ ಸಹಿತನಾಗಿ ಶ್ರೀ ಸತ್ಯನಾರಾಯಣ ದೇವರನ್ನು ಪೂಜಿಸಿ ನೈವೇದ್ಯವನ್ನು ಸಮರ್ಪಿಸಿದನು. ಭಕ್ತಿಯಿಂದ ಕಥೆ ಕೀರ್ತನೆಗಳನ್ನು ಶ್ರವಣ ಮಾಡಿ ವ್ರತವನ್ನು ಮುಗಿಸಿದನು. ಆ ವ್ರತದ ಪ್ರಭಾವದಿಂದ ಮಕ್ಕಳನ್ನೂ ಧನವನ್ನೂ ಪಡೆದನು. ಇಹಲೋಕದಲ್ಲಿ ಸುಖವನ್ನುಂಡು ಕೊನೆಗೆ ಮೋಕ್ಷವನ್ನು ಹೊಂದಿದನು. ಇಂತು ಶ್ರೀ ಸ್ಕಂದ ಪುರಾಣದ ರೇಖಾಖಂಡದಲ್ಲಿ ಹೇಳಲಾದ ಶ್ರೀ ಸತ್ಯನಾರಾಯಣನ ಕಥೆಯಲ್ಲಿ ಎರಡನೆಯ ಅಧ್ಯಾಯವು ಇಲ್ಲಿಗೆ ಮುಗಿಯಿತು ಎಂದು ಸೂತನು ಹೇಳಿದನು.


೩ನೇ ಅಧ್ಯಾಯ

ತರುವಾಯ ಸೂತಪುರಾಣಿಕನು ಋಷಿಶ್ರೇಷ್ಠರನ್ನು ಕುರಿತು ಶ್ರೀ ಸತ್ಯನಾರಾಯಣನ ಅತುಲ ಪ್ರಭಾವದ ಬಗೆಯನ್ನು ವ್ಯಕ್ತಪಡಿಸಲು ಒಂದು ಕಥೆಯನ್ನು ಹೇಳುವೆನು ಎಂದು ಪ್ರಸ್ತಾಪಿಸಿ ಹೇಳಲು ಆರಂಭಿಸಿದನು.

ಪೂರ್ವಕಾಲದಲ್ಲಿ ನಮ್ಮ ಆರ್ಯವರ್ತದೊಳಗೆ ಒಂದು ವಿಸ್ತೃತವಾದ ರಾಜ್ಯವನ್ನು ಉಲ್ಕಾಮುಖನೆಂಬ ಅರಸನು ಆಳುತ್ತಿದ್ದನು. ಆತನು ಜಿತೇಂದ್ರಿಯನು ಮತ್ತು ಸತ್ಯವಾದಿಯೂ ಆಗಿದ್ದನು. ಧರ್ಮನಿರತವಾದ ಅರಸನು ಪ್ರತಿ ನಿತ್ಯವೂ ತಪ್ಪದೇ ದೇವಸ್ಥಾನಗಳಿಗೆ ಹೋಗುವನು. ದೇವರ ದರ್ಶನ ಪಡೆಯುವನು, ದೀನ ಯಾಚಕರಿಗೂ, ಬ್ರಾಹ್ಮಣರಿಗೂ ದಾನ ಮಾಡಿ ಅವರನ್ನು ಸಂತೋಷಗೊಳಿಸುವನು. ಅದೇ ಈಶ್ವರ ಪೂಜೆ ಎಂದು ನಂಬುವನು. 'ಪ್ರಮಗ್ಧ' ಎಂಬ ಸುಶೀಲವತಿಯಾದ ಸಾಧ್ವಿಯು ಆತನ ಧರ್ಮಪತ್ನಿಯು. ಪತಿಪತ್ನಿಯರೀರ್ವರೂ ಆಗಿನ ಕಾಲಕ್ಕೆ ಆದರ್ಶಪ್ರಾಯರಾಗಿದ್ದರು. ರಾಜನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲರೂ ಸುಖಿಯಾಗಿದ್ದರು. 

ಒಂದು ದಿನ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸುವೆವೆಂದು ಸಂಕಲ್ಪಿಸಿದರು. ಬದ್ರಶೀಲಂ ಎಂಬ ನದೀ ತೀರಕ್ಕೆ ಬಂದಿಳಿದರು. ಪೂಜೆಯ ಸಾಮಗ್ರಿಗಳೆಲ್ಲವನ್ನೂ ಮುಂದಾಗಿಯೇ ಸಜ್ಜುಗೊಳಿಸಲಾಗಿತ್ತು. ಆದ್ದರಿಂದ ಅವರು ಶ್ರೀ ಸತ್ಯನಾರಾಯಣ ಪೂಜೆಯನ್ನು ಆರಂಭಿಸಿದರು. ಅಷ್ಟರಲ್ಲಿ ಒಬ್ಬ ಸಾಧುವು ಹೊಳೆಯ ಮಾರ್ಗವಾಗಿ ಬಂದಿಳಿದನು. ಅವನು ತನ್ನ ಹಾದಿಯಲ್ಲಿ ಬಹಳಷ್ಟು ಪದಾರ್ಥಗಳನ್ನು ತುಂಬಿಕೊಂಡು ವ್ಯಾಪಾರ ಮಾಡಲು ಮುಂದೆ ಹೊರಟಿದ್ದನು. ಅಲ್ಲಿಯೇ ನದಿ ದಂಡೆಯಲ್ಲಿ ವ್ರತವನ್ನು ಮಾಡುತ್ತಾ ಕುಳಿತ ರಾಜನನ್ನು ನೋಡಿದನು. ಈ ಪ್ರಕಾರವು ಎನೆಂಬುವುದನ್ನು ತಿಳಿದುಕೊಳ್ಳಲು ಕುತೂಹಲ ಉಂಟಾಯಿತು. ಅದಕ್ಕಾಗಿ ನಾವೆಯನ್ನು ಅಲ್ಲಿಯೇ ನಿಲ್ಲಿಸಿದನು. ತನ್ನ ಕರ್ಮದಲ್ಲಿ ನಿರತನಾದ ಅರಸನನ್ನು ಕಂಡು ಆ ವ್ಯಾಪಾರಿಯು 'ಅರಸನೇ! ತಾವು ಇದೀಗ ಇಷ್ಟೊಂದು ಭಕ್ತಿಯುತವಾದ ಮನಸ್ಸಿನಿಂದ ಮಾಡುತ್ತಲಿರುವ ಕರ್ಮ ಅದಾವುದು? ಅದಾವ ಫಲವನ್ನು ಹೊಂದಲು ಈ ಕರ್ಮವನ್ನು ಮಾಡುತ್ತಲಿರುವಿರಿ? ಎಂಬುದನ್ನು ಕೇಳಲು ನಾನು ಬಯಸುವೆ. ಅವನ ನುಡಿಗಳನ್ನು ಕೇಳಿ ಅರಸನು ಎಲೈ ಸಾಧುವೇ! ಈಗ ನಾನು ವಿಷ್ಣುವನ್ನು ಶ್ರೀಮನ್ನಾರಾಯಣನನ್ನು ಪೂಜಿಸುತಲಿರುವೆ. ಈ ವ್ರತದ ಫಲವಾಗಿ ಮಾನವನು ಧನ ಧಾನ್ಯ ಸಂತಾನಗಳ ನಿಧಿಯನ್ನು ಹೊಂದುವನು. ಬಹಳ ಹೇಳುವುದೇನು? ಮಾನವನ ಮನೋರಥಗಳೆಲ್ಲವೂ ಕೈಗೂಡುವುವು. ಇದು ನಿಶ್ಚಿತ ಎಂದು ಸಾಧುವಿಗೆ ವ್ರತದ ಪ್ರಭಾವವನ್ನು ವಿವರಿಸಿದನು.

ರಾಜನನ್ನು ಕುರಿತು 'ಅರಸನೇ ಈ ವ್ರತವನ್ನು ಯಾವ ರೀತಿಯಾಗಿ ಆಚರಿಸಬೇಕೆಂದು ಸವಿಸ್ತಾರವಾಗಿ ಹೇಳು'. ಈ ವ್ರತದಿಂದ ಸಂತತಿ ಉಂಟಾಗುವುದೆಂದು ನಿಶ್ಚಿತವಿದ್ದರೆ ನಾನಾದರೂ ಈ ವ್ರತವನ್ನು ಮಾಡುವೆನು ಎಂದು ಹೇಳಿದನು. ಮತ್ತು ರಾಜನ ಮುಖದಿಂದ ಕರಟದ ವಿಧಾನವನ್ನೆಲ್ಲ ಅರಿತುಕೊಂಡನು ಮತ್ತು ಸಂತೋಷಮನಸ್ಕನಾಗಿ ವ್ಯಾಪಾರವನ್ನು ಅಲ್ಲಿಯೇ ನಿಲ್ಲಿಸಿ ಮನೆಗೆ ಬಂದನು. 

ಮನೆಯಲ್ಲಿರುವ ಲೀಲಾವತಿ ಎಂಬ ತನ್ನ ಪ್ರಿಯ ಪತ್ನಿಯನ್ನು ಕುರಿತು ಸಂತತಿಯನ್ನು ಕೊಡುವಂತಹ ಆ ವ್ರತವನ್ನು ತಿಳಿಸಿ ಅರಸನಿಂದ ಅರಿತುಕೊಂಡ ವಿಧಾನಗಳನ್ನೆಲ್ಲಾ ಹೇಳಿ 'ಪ್ರಿಯೇ, ನನಗೆ ಸಂತತಿಯಾದ ನಂತರ ನಾನಾದರೂ ಈ ವ್ರತವನ್ನು ಮಾಡುವೆನೆಂದು ಹೇಳಿದನು. ಈ ವ್ರತವನ್ನು ಮಾಡುವೆನೆಂದು ಸಂಕಲ್ಪಿಸಿದ ಮಾತ್ರಕ್ಕೆ ಶ್ರೀ ಸತ್ಯನಾರಾಯಣನು ಸುಪ್ರೀತನಾಗಿ, ಆತನ ಅನುಗ್ರಹದಿಂದ ಲೀಲಾವತಿಯು ಗರ್ಭಿಣಿಯಾದಳು. ಲೀಲಾವತಿಯ ಗರ್ಭಕ್ಕೆ ಒಂಭತ್ತು ತಿಂಗಳು ತುಂಬಿದವು. ಒಂದು ಶುಭ ದಿನದಲ್ಲಿ ಸುಂದರವಾದ ಒಂದು ಕನ್ಯಾರತ್ನವು ಜನಿಸಿತು. ಆಗ ದಂಪತಿಗಳಿಗೆ ಆದ ಆನಂದವು ಹೇಳತೀರದು. ಮಗುವಿಗೆ ಜಾತಕ ಕರ್ಮ, ನಾಮಕರಣಾದಿ ಸಂಸ್ಕಾರಗಳು ಮಾಡಲ್ಪಟ್ಟವು. ಕೂಸಿಗೆ ಕಲಾವತಿ ಎಂದು ಹೆಸರಿಟ್ಟರು. 

ಆ ಮಗಳು ಬೆಳೆಯುತ್ತಾ ದೊಡ್ದವಳಾಗ ಹತ್ತಿದಳು. ಬಳಿಕ ಒಂದು ದಿನ ಲೀಲಾವತಿಯು ತನ್ನ ಪತಿಯನ್ನು ಕುರಿತು 'ಸ್ವಾಮಿಯೇ ಶ್ರೀ ಸತ್ಯನಾರಾಯಣ ದೇವನ ಕೃಪೆಯಿಂದ ನಮಗೆ ಸಂತತಿ ಲಭಿಸಿತು. ಕೂಸು ಬೆಳೆಯಿತು. ಮಗಳು ದೊಡ್ಡವಳಾದಳು. ಆದರೆ ನೀವು ಹಿಂದಕ್ಕೆ ಹರಕೆ ಹೊತ್ತಂತೆ ಇದುವರೆಗೆ ಶ್ರೀ ಸತ್ಯನಾರಾಯಣ ವ್ರತವನ್ನು ಆಚರಿಸಲಿಲ್ಲವಲ್ಲಾ' ಎಂದು ಸಂಕಲ್ಪಿಸಿದ ಸ್ಮರಣೆಯನ್ನು ಇತ್ತಳು. ಅದಕ್ಕೆ ಪ್ರತ್ಯುತ್ತರವಾಗಿ ಆ ಬಣಜಿಗನು 'ಪ್ರಿಯೇ! ಅಹುದು. ನಾನು ಬೇಡಿಕೊಂಡ ಹರಕೆಯು ನನ್ನ ಸ್ಮರಣೆಯಲ್ಲಿದೆ. ಆದರೆ ಈಗ ಕಾರ್ಯಬಾಹುಲ್ಯದ ಮೂಲಕ ಆ ವ್ರತವನ್ನು ಆಚರಿಸಲು ಸಾಧ್ಯವಿಲ್ಲ. ನಮ್ಮ ಕಲಾವತಿಗೆ ವರನನ್ನು ಶೋಧಿಸಿ ಬೇಗನೆ ವಿವಾಹವನ್ನು ಮಾಡಬೇಕಾಗಿದೆ. ಅದೇ ಸಮಯಕ್ಕೆ ಹರಕೆಯನ್ನು ಮುಗಿಸಿದರಾಯ್ತು' ಎಂದು ಹೆಂಡತಿಯನ್ನು ಸಮಾಧಾನಗೊಳಿಸಿದನು. 

ಕಲಾವತಿ ಒಂದು ದಿನ ತನ್ನ ಪುರೋಹಿತನನ್ನು ಕರೆದು ಮಗಳಿಗಾಗಿ ಕುಲಶೀಲ ರೂಪಗಳಿಂದ ಉತ್ತಮನಾದ ವರನನ್ನು ಗೊತ್ತುಪಡಿಸು ಎಂದು ಹೇಳಿ ಕಳುಹಿಸಿದನು. ಪುರೋಹಿತನು ಕಾಂಚನ ಎಂಬ ಪಟ್ಟಣಕ್ಕೆ ಹೋದನು. ಅಲ್ಲಿ ಒಬ್ಬ ವಣಿಕ ಪುತ್ರನನ್ನು ವರನನ್ನಾಗಿ ಆರಿಸಿದನು. ಅವನನ್ನು ಕರೆತಂದು ಸಾಧುವಿಗೆ ತೋರಿಸಿದನು. ಕುಲೀನನೂ ಆದ ಚೆಲುವನೂ ಆದ ಎಲ್ಲ ಸದ್ಗುಣಗಳಿಂದ ಪೂರ್ಣನೂ ಆದ ವಣಿಕಪುತ್ರನನ್ನು ನೋಡಿ ಸಾಧುವು ಸಂತೋಷಭರಿತನಾದನು. ತನ್ನ ಜ್ಞಾತಿಗಳಿಂದ ಬಾಂಧವರಿಂದಲೂ ಕೂಡಿಕೊಂಡು ವಿಧಿಯುಕ್ತ ಮಾರ್ಗದಿಂದ ಮಗಳನ್ನು ವಣಿಕಪುತ್ರನಿಗೆ ಮಾಡುವೆ ಮಾಡಿಕೊಟ್ಟನು. ವಿವಾಹ ಸಮಾರಂಭವು ಬಣಜಿಗನ ಸಿರಿವಂತಿಕೆಗೆ ತಕ್ಕಂತೆ ಒಳ್ಳೆಯ ಸಡಗರದಿಂದ ನೆರವೇರಿತು. ಮದುವೆಗಾಗಿ ಅಪರಿಮಿತ ಧನವನ್ನು ವ್ಯಯಿಸಿದನು. ಆದರೆ ಮನೆಯಲ್ಲಿ ಭಾಗ್ಯವು ಹೆಚ್ಚಾಗುತ್ತಾ ಹೋದಂತೆ ಆ ಐಶ್ವರ್ಯದ ಮದದಲ್ಲಿ ಮಗಳ ಲಗ್ನದ ಕಾಲಕ್ಕಾದರೂ ಆ ಸಾಧುವು ಶ್ರೀ ಸತ್ಯನಾರಾಯಣನ ವ್ರತವನ್ನು ಮರೆತುಬಿಟ್ಟನು. ಆದ್ದರಿಂದ ಶ್ರೀ ಸತ್ಯನಾರಾಯಣನು ಸಿಟ್ಟಾದನು. ಮುಂದೆ ಕೆಲಕಾಲದ ನಂತರ ತನ್ನ ವ್ಯವಹಾರ ಕರ್ಮದಲ್ಲಿ ಕುಶಲನಾದ ಸಾಧುವು ಬ್ಯಾಪಾರ ಮಾದುವುದಕಾಗಿ ಅಳಿಯನ ಜತೆಗೂಡಿ ಸಿಂಧೂ ನದಿ ತೀರದಲ್ಲಿರುವ ರತ್ನಸಾರವೆಂಬ ಪಟ್ಟಣಕ್ಕೆ ಹೋದನು. ಅಲ್ಲಿ ಕೆಲವು ದಿನಗಳವರೆಗೆ ವ್ಯಾಪಾರ ಮಾಡಿದನು. ಅಲ್ಲಿ ಹೇರಳ ಹಣವನ್ನು ಸಂಪಾದಿಸಿಕೊಂಡು ಸಾಧುವು ಆತನ ಅಳಿಯನು ಇಬ್ಬರೂ ಅಲ್ಲಿಂದ ಹೊರಟರು.

ಅತೀ ಮನೋಹರನಾದ ಚಂದ್ರಕೆತು ರಾಜನ ರಾಜಧಾನಿಗೆ ವ್ಯಾಪಾರ ಮಾಡುವುದಕ್ಕಾಗಿ ಬಂದರು. ಅಲ್ಲಿರುವಾಗ ಆ ಬಣಜಿಗನಿಗೆ ಕನಸಿನಲ್ಲಿ ಅವನಿಗೆ ಶ್ರೀ ಸತ್ಯನಾರಾಯಣನು ಕಾಣಿಸಿಕೊಂಡನು ಮತ್ತು ಆ ದೇವನು ಸಾಧುವನ್ನು ಕುರಿತು 'ಎಲೈ ಸಾಧುವೇ! ನೀನು ವ್ರತ ಮಾಡುವ ಪ್ರತಿಜ್ಞೆಯನ್ನು ಮಾಡಿ ಈಗ ಭ್ರಷ್ಟ ಪ್ರತಿಜ್ಞಾನಾಗಿರುವೆ. ಅದಕ್ಕಾಗಿ ಭಯಂಕರವಾಗಿಯೂ ಕಠಿಣವಾಗಿಯೂ ಇರುವ ಮಹಾ ದುಃಖವೂ ಉಂಟಾಗಲಿ.' ಎಂದು ಶಾಪವಿತ್ತನು. ಬಳಿಕ ಸಾಧುವು ಸ್ವಪ್ನದಿಂದ ಎಚ್ಚೆತ್ತು ಬಳಿಕ ಅವನ್ನು ನಂಬಲಾಗದೆ ಎಂದಿನಂತೆ ತನ್ನ ವ್ಯವಹಾರವನ್ನು ಸಾಗಿಸುತಲಿದ್ದನು. ಅನಂತರ ಕೆಲಕಾಲದ ಮೇಲೆ ಚಂದ್ರಕೆತು ರಾಜನಲ್ಲಿ ರಾಜಧಾನಿಯಲ್ಲಿ ಕಳವು ಸಂಭವಿಸಿತು. ಒಬ್ಬ ಕಳ್ಳನುರಾಜನ ದ್ರವ್ಯವನ್ನು ಕದ್ದು ಸಾಧು ಮತ್ತು ಸಾಧುವಿನ ಅಳಿಯನಿರುವಲ್ಲಿಗೆ ಓಡಿಬಂದನು. ತನ್ನನ್ನು ಬೆನ್ನಟ್ಟಿದ ರಾಜದೂತರ ಸುಳಿವನ್ನು ಕಂಡು ಅಂಜಿ ಕಳ್ಳನು ತಾನು ತಂದ ರಾಜದ್ರವ್ಯವನ್ನು ಅಲ್ಲಿಯೇ ಬಿಟ್ಟು ಬಹು ಬೇಗನೆ ಅಡಗಿಕೊಂಡನು. ರಾಜದೂತರು ಸಾಧುವಿದ್ದ ಸ್ಥಳಕ್ಕೆ ಬರಲು ಅಲ್ಲಿ ರಾಜದ್ರವ್ಯವು ಕಾಣಿಸಿತು. ಆದ್ದರಿಂದ ಅವರೇ ಕಳ್ಳರೆಂದು ಭಾವಿಸಿ ಅವರಿಬ್ಬರನ್ನೂ ಹೆಡೆಮುರಿಬಿಗಿದು ಕಟ್ಟಿ ರಾಜನೆಡೆಗೆ ಒಯ್ದರು.  

ಅರಸನ ಆಜ್ಞೆಯಂತೆ ರಾಜದೂತರು ಆ ಬಣಜಿಗರನ್ನು ತೀರ ಕಠಿಣಮಾರ್ಗದಲ್ಲಿರುವ ಒಂದು ಸೆರೆಮನೆಯಲ್ಲಿ ಒಯ್ದು ಇಟ್ಟರು. ಸಾಧುವು ತಾವು ಕಳ್ಳರಲ್ಲವೆಂದು ರಾಜನಿಗೆ ಪರಿಪರಿಯಾಗಿ ಕೇಳಿಕೊಂಡನು. ಆದಾಗ್ಯೂ ಅರಣ್ಯರೋಧನವಾಯ್ತು. ರಾಜನು ತನ್ನ ದ್ರವ್ಯದೊಂದಿಗೆ ಅವರ ದ್ರವ್ಯವನ್ನೂ ತನ್ನ ಭಂಡಾರಕ್ಕೆ ಕಳುಹಿಸಿದನು.

ಆಗ ಸಾಧುವು ತಾನು ಶ್ರೀ ಸತ್ಯನಾರಾಯಣ ದೇವರ ಸಂಕಲ್ಪ ಮಾಡಿ ವ್ರತ ಮಾಡದೇ ಭ್ರಷ್ಟನಾದೆನಲ್ಲಾ? ದೇವನೇ ಕೋಪಿಸಿಕೊಂಡಮೇಲೆ ನಮ್ಮನ್ನು ಕಾಪಾಡುವವರಾರು? ಎಂದು ಪಶ್ಚಾತ್ತಾಪದಿಂದ ತಳಮಳಗೊಂಡನು. ಕಳವು ಮಾಡದೇ ಸಾಧುವು ಮತ್ತು ಆತನ ಅಳಿಯನು ಶಿಕ್ಷೆಗೊಳಗಾಗಬೇಕಾಯ್ತು.

ಇತ್ತ ಸಾಧುವಿನ ಹೆಂಡತಿ, ಮಗಳು ದುಃಖಪೂರಿತರಾದರು. ಮನೆಯೊಳಗಿನ ದ್ರವ್ಯವೆಲ್ಲವೂ ಕಳುವಾಗಿದ್ದರಿಂದ ಅವರು ಅನ್ನಾನ್ನಗತಿತರಾದರು. ಆದಿ ವ್ಯಾಧಿಗಳಿಂದ ಪೀಡೆಗೊಂಡರು. ಹಸಿವೆ ನೀರಡಿಕೆಗಳಿಂದ ಕಣಗಾಲ ಸ್ಥಿತಿಯನ್ನು ಹೊಂದಿದರು. ಆಹಾರಹೀನತೆಗಳಿಂದ ಅವರಿಬ್ಬರೂ ಭಿಕ್ಷಾವೃತ್ತಿಯನ್ನು ಅವಲಂಬಿಸಬೇಕಾಯ್ತು. ಕಲಾವತಿಯಂತಹ ಹರೆಯದವಳು ಮತ್ತು ಸಿರಿವಂತಿಕೆಯಲ್ಲಿ ಬೆಳೆದವಳು ಹೊಟ್ಟೆಯ ಕಿಚ್ಚನ್ನು ತಣಿಸಲು ಭಿಕ್ಷೆಗಾಗಿ ಮನೆಮನೆಗೆ ತಿರುಗಹತ್ತಿದಳು. ಇಂತೂ ಸಾಧುವಿನ ಹೆಂಡತಿಯೂ ಮಗಳೂ ಅಷ್ಟದರಿದ್ರರಾದರು. ಸಾಧುವೂ ಮತ್ತು ಅಳಿಯನೂ ಸೆರೆಮನೆವಾಸಿಗಳಾಗಿಯೂ ದುಃಖದಿಂದ ಕಾಲಕಳೆಯಹತ್ತಿದರು. ಇಂತಹ ಸಹಿಸಲಸಾಧ್ಯವಾದ ಅಪವಾದ ಆ ಸಿರಿವಂತಿಕೆಯ ಕುಟುಂಬಕ್ಕೆ ಒದಗಿತೆಂದು ಭಾವಿಸಿದನು.

ಒಂದು ದಿನ ಕಲಾವತಿಯು ಹಸಿವೆಯಿಂದ ಬಹಳ ಬಳಲಿ ಒಬ್ಬ ಬ್ರಾಹ್ಮಣನ ಮನೆಯ ಬಾಗಿಲಿಗೆ ಹೋದಳು. ಭಿಕ್ಷೆಯ ಬೇಡಿಕೆಗಾಗಿ ಕೂಗಬೇಕೆನ್ನುವಷ್ಟರಲ್ಲಿ ಬ್ರಾಹ್ಮಣನು ಮಾಡುತ್ತಿರುವ ಶ್ರೀ ಸತ್ಯನಾರಯಣನ ವ್ರತವು ಆಕೆಯ ಕಣ್ಣಿಗೆ ಬಿತ್ತು. ಕೂಡಲೇ ಭಕ್ತಿಯುತರಾಗಿ ಅಂತಃಕರಣ ಉಳ್ಳವರಾಗಿ ಅಲ್ಲಿ ಸ್ವಲ್ಪ ಹೊತ್ತು ಕುಳಿತಳು. ದೈವೀ ಪ್ರಭಾವದಿಂದ ಕಥೆಯನ್ನು ಕೇಳಿದಳು. 

ಶ್ರೀ ಸತ್ಯನಾರಾಯಣನನ್ನು ಮನಸ್ಸಿನಲ್ಲಿ ಪ್ರಾರ್ಥಿಸಿದಳು. ಭಕ್ತಿಯಿಂದ ಪ್ರಸಾದವನ್ನು ಭಕ್ಷಿಸಿದಳು. ರಾತ್ರಿಯೂ ಬಹಳವಾದ ಪ್ರಯುಕ್ತ ಹೊರಟು ಮನೆಗೆ ಬಂದಳು. ಕಲಾವತಿಯು 'ತಾಯೀ! ನಾನು ಇದುವರೆಗೂ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಕುಳಿತಿದ್ದೆನು. ಅಲ್ಲಿ ಬ್ರಾಹ್ಮಣನು ಒಂದು ವ್ರತವನ್ನು ಮಾಡುತಲಿದ್ದನು. ಅದಕ್ಕೆ ಶ್ರೀ ಸತ್ಯನಾರಾಯಣವ್ರತವೆಂದು ಹೇಳುವರಂತೆ. ಅದು ಮನದ ಬಯಕೆಗಳನ್ನು ಪೂರ್ಣ ಮಾಡಲು ಸಮರ್ಥವಾದುದಂತೆ. ನಾನು ಆ ಪೂಜೆಯ ಕ್ರಮವನ್ನು ಕಣ್ತುಂಬ ನೋಡಿದೆ.' ಎಂದು ಹೇಳಿ ತನ್ನ ತಾಯಿಗೂ ತುಸು ಪ್ರಸಾದವನ್ನು ಕೊಟ್ಟಳು. ಈ ಸಂಗತಿಯನ್ನು ಕೇಳಿ ಲೀಲಾವತಿಗೆ ಒಳ್ಳೆಯ ಹರ್ಷವಾಯಿತು. ತನ್ನ ಪತಿಯು ಹರಕೆ ಹೊತ್ತ ವ್ರತವು ಇದೇ ಆಗಿರಬೇಕೆಂದು ಭಾವಿಸಿ ತಾವೂ ಅದನ್ನು ಕೈಗೊಂಡರು.

ದೈವೀಕೊಪದಿಂದ ತನ್ನ ಪತಿ ಹಾಗು ಅಳಿಯ ಶಿಕ್ಷೆ ಅನುಭವಿಸುತ್ತಲಿರುವರೆಂದು ತಮ್ಮ ಐಶ್ವರ್ಯವೆಲ್ಲಾ ನಾಶವಾಗಿ ಭಿಕ್ಷಾವೃತ್ತಿಗೆ ಇಳಿದೆವೆಂದು ನಿಶ್ಚಿತ ತಿಳುವಳಿಕೆಯು ಅವಳಲ್ಲಿ ಉಂಟಾಯಿತು. ಕೂಡಲೇ ಪೂಜೆಯ ಮತ್ತು ಪ್ರಸಾದದ ಸಾಮಗ್ರಿಗಳನ್ನು ತಂದಳು. ಒಳ್ಳೆಯ ಸಂತೋಷದಿಂದ ತಾನೂ ತನ್ನ ಭಾಂದವರಿಂದಲೂ ಜ್ಞಾತಿಯ ಜನರಿಂದಲೂ ಭಕ್ತಿಪೂರ್ವಕವಾಗಿ ಶ್ರೀ ಸತ್ಯನಾರಾಯಣನ ಪೂಜೆ ಮಾಡಿದಳು. ಅಲ್ಲಿ ಶ್ರೀ ಸತ್ಯನಾರಾಯಣನನ್ನು ಕುರಿತು 'ದೇವಾ! ನನ್ನ ಗಂಡನೂ ಮತ್ತು ಅಳಿಯನೂ ಬೇಗ ಬರಲಿ. ಅವರು ಮಾಡಿದ ಅಪರಾಧವನ್ನು ಕ್ಷಮಿಸು' ಎಂದು ಬೇಡಿಕೊಂಡಳು. ಸಾಧುವಿನ ಹೆಂಡತಿಯಾದ ಲೀಲಾವತಿಯೂ ಅಂತಃಕರಣದಿಂದ ಮಾಡಿದ ಪೂಜೆಯ ವ್ರತದಿಂದ ಶ್ರೀಮನ್ನ್ನಾರಾಯಣನು ಸಂತುಷ್ಟನಾದನು. ಆ ಕೂಡಲೇ ಚಂದ್ರಕೇತು ರಾಜನ ಸ್ವಪ್ನದಲ್ಲಿ ಹೋಗಿ 'ರಾಜನೇ! ನೀನು ಕಾರಾಗೃಹದಲ್ಲಿ ಇತ್ತ ಇಬ್ಬರು ಬಣಜಿಗರನ್ನು ಬೆಳಗಾದ ಕೂಡಲೇ ಮುಕ್ತಮಾಡು. ನೀನು ತೆಗೆದುಕೊಂಡ ಅವರ ದ್ರವ್ಯವನ್ನು ಅವರಿಗೇ ಕೊಡು. ಧನಲಾಭದಿಂದ ನೀನು ಹಾಗೆ ಮಾಡದೇ ಹೋದರೆ ರಾಜ್ಯ ಐಶ್ವರ್ಯ ಹಾಗು ಮಕ್ಕಳೊಂದಿಗೆ ನಿನ್ನನ್ನು ನಾಶಮಾಡಿಬಿಡುವೆ.' ಎಂದು ಹೇಳಿ ಅದೃಶ್ಯನಾದನು.

ಅನಂತರ ರಾಜನು ಮುಂಜಾವಿನಲ್ಲಿ ಎದ್ದು ಸೃಜನರಿಂದ ಕೂಡಿಕೊಂಡು ತನ್ನ ಸ್ವಪ್ನ ದೃಷ್ಟಾಂತವನೆಲ್ಲಾ ತಿಳಿಸಿದನು. ಅನಂತರ ಬಣಜಿಗರು ರಾಜನಿಗೆ ನಮಸ್ಕರಿಸಿ ತಮ್ಮ ಹಿಂದಿನ ವೃತ್ತಾಂತವನ್ನೆಲ್ಲ ತಿಳಿಸಿದರು. ಬಳಿಕ ರಾಜನು ಅವರಿಗೆ ಏನೋ ನಿಮ್ಮ ದುರ್ದೈವದಿಂದ ಇಂತಹ ದುಃಖವನ್ನು ಅನುಭವಿಸಬೇಕಾಯ್ತು. ಇನ್ನು ಮುಂದೆ ನಿಮಗೆ ಏನೂ ಭಯವಿಲ್ಲವೆಂದು ಹೇಳಿ ಅವರಿಬ್ಬರ ಸಂಕೋಲೆಯನ್ನು ಕಡಿಸಿದನು. ವಸ್ತ್ರಾಲಂಕಾರ ನೀಡಿದನು. ಅವರನ್ನು ಸಂತೋಷಗೊಳಿಸಿ ಒಳ್ಳೆಯ ಮಾತುಗಳಿಂದ ಸಮಾಧಾನಪದಿಸಿದನು. 'ಸಾಧುವೇ! ಇನ್ನು ನೀನು ಮನೆಗೆ ಹೋಗು.' ಎಂದು ಆಜ್ಞಾಪಿಸಿದನು. 

ಅಲ್ಲಿ ಸಾಧುವು ರಾಜನಿಗೆ ನಮಸ್ಕರಿಸಿ ಊರಿಗೆ ತೆರಳಲು ಅವರೀರ್ವರೂ ಹೊರಟರು. ಮಾರ್ಗ ಕ್ರಮಿಸತೊಡಗಿತು. 'ಋಷಿಶಿಷ್ಯರೇ! ಆ ಸಾಧು ವೈಶ್ಯನ ಕಥೆಯು ಇಲ್ಲಿಗೇ ಮುಗಿಯಲಿಲ್ಲ. ಅದನ್ನೇ ಮುಂದುವರಿಸಿ ಹೇಳುವೆ ಕೇಳಿರಿ' ಎಂದು ಸೂತಪುರಾಣಿಕನು ಹೇಳಿದ್ದನ್ನೇ ಸ್ಕಂದ ಪುರಾಣದ ರೇಖಾ ಖಂಡದಲ್ಲಿ ಉಲ್ಲೇಖಿತವಾಗಿದ್ದ ಸಂಗತಿಗಳನ್ನೊಳಗೊಂಡ ಮೂರನೇ ಅಧ್ಯಾಯವು ಮುಗಿಯಿತು.


೪ನೇ ಅಧ್ಯಾಯ

ಸೂತಪುರಾಣಿಕನು ಹಿಂದಿನ ಕಥೆಯನ್ನೇ ಮುಂದುವರಿಸುತ್ತಾ ಋಷಿಗಳನ್ನು ಕುರಿತು ಶ್ರೀ ಸತ್ಯನಾರಾಯಣನ ಕೃಪೆಯಿಂದ ಸಾಧುವು ಆತನ ಅಳಿಯನೂ ಬಂಧಿವಾಸದಿಂದ ಮುಕ್ತರಾದರು. 

ಅನಂತರ ಆ ಸಾಧುವು ಆ ಚಂದ್ರಕೇತು ರಾಜನ ನಗರದಿಂದ ತನ್ನ ಊರಿಗೆ ಹೋಗಬೇಕೆಂದು ಆಲೋಚಿಸಿದನು. ವ್ಯಾಪಾರವು ಚೆನ್ನಾಗಿ ಸಾಗಿದ್ದರಿಂದ ಚೆನ್ನಾಗಿ ದ್ರವ್ಯ ಸಂಪಾದನೆ ಆಗಿತ್ತು. ಸಾಧುವು ಹೊರಡುವ ಮುನ್ನ ಬ್ರಾಹ್ಮಣನಿಂದ ಪುಣ್ಯವಾಚನವನ್ನು ಮಾಡಿಸಿಕೊಂಡನು. ಅನಂತರ ಮಾವ ಅಳಿಯರೀರ್ವರೂ ಸಿಂಧೂ ನದಿಯ ಹತ್ತಿರ ಬಂದರು. ಸಾಧುವು ತಮ್ಮ ಬಳಿಯಲ್ಲಿದ್ದ ದ್ರವ್ಯವನ್ನೆಲ್ಲಾ ನಾವೆಯಲ್ಲಿ ತುಂಬಿದರು ಮತ್ತು ಆ ನಾವೆಯ ಹತ್ತಿರ ನಿಂತುಕೊಂಡನು. ಅಷ್ಟರಲ್ಲಿ ಶ್ರೀ ಸತ್ಯನಾರಾಯಣನು ಸಾಧು ವೈಶ್ಯನ ಚಿತ್ತವನ್ನು ಪರೀಕ್ಷಿಸುವ ಕುರಿತು ಶ್ರೀ ದಂಡಿ ಸನ್ಯಾಸಿಯ ವೇಷದಿಂದ ಅಲ್ಲಿಗೆ ಬಂದು ಅವನನ್ನು ಕುರಿತು “ಈ ನಾವೆಯಲ್ಲಿ ನೀನು ಏನನ್ನು ತುಂಬಿರುವೆ?” ಎಂದು ಕೇಳಿದನು. ಆ ಬಣಜಿಗರು ಸೊಕ್ಕಿನಿಂದ ದೊಡ್ಡ ಧ್ವನಿ ತೆಗೆದು ನಗಹತ್ತಿದರು. ನಂತರ ಸಾಧುವೈಶ್ಯನು ಸನ್ಯಾಸಿಯನ್ನು ಕುರಿತು 'ಎಲೈ ಸನ್ಯಾಸಿಯೇ! ನೀನು ಇದನ್ನೆಲ್ಲಾ ಕೇಳಿ ಮಾಡುವುದೇನಿದೆ? ಹೆಂಡಿರು ಮಕ್ಕಳು ಇಲ್ಲದವನು ನೀನು. ಎಲ್ಲಾ ಆಸೆಯನ್ನು ತೊರೆದು ವೈರಾಗ್ಯದಿಂದ ವರ್ತಿಸುವವನು. ಹೀಗಿದ್ದೂ ಈ ಜಿಜ್ಞಾಸೆ ನಿನಗೇಕೆ? ಹಣವನ್ನೆಲ್ಲಾ ಕಳುವಿನಿಂದ ಎಬ್ಬಿಸಬೇಕೆಂದಿರುವಿ ಏನು? ಈ ಬಯಕೆ ನಿನ್ನಲ್ಲಿದ್ದರೆ ಅದು ಈಡೇರಬಾರದು. ಏಕೆಂದರೆ ನಾವು ಇದರಲ್ಲಿ ಹಣವನ್ನು ತುಂಬಿಲ್ಲ. ನಾವೆಯಲ್ಲಿ ಬಳ್ಳಿ ಎಲೆ ಪತ್ರಾದಿಗಳು ತುಂಬಿವೆ ಎಂದನು. ಆ ತರಹ ತೀರ ನಿಷ್ಟುರವಾದ ನುಡಿಯನ್ನು ಕೇಳಿ “ನೀವು ನುಡಿದದ್ದೇ ಸತ್ಯವಾಗಲಿ' ಎಂದು ಸನ್ಯಾಸಿಯು ನುಡಿದನು ಮತ್ತು ಅಲ್ಲಿಂದ ಹೊರಟು ತುಸು ದೂರ ಹೋಗಿ ಅಲ್ಲಿಯೇ ಸಿಂಧೂ ನದಿಯ ದಡದಲ್ಲಿ ಭವಿತವ್ಯವನ್ನು ನಿರೀಕ್ಷಿಸುತ್ತ ಕುಳಿತುಕೊಂಡನು.

ಸನ್ಯಾಸಿಯು ಹೋದನಂತರ ಇತ್ತ ಸಾಧುವು ತನ್ನ ನಿತ್ಯಕರ್ಮವನ್ನು ತೀರಿಸಿಕೊಂಡು ಆ ನಾವೆಯ ಹತ್ತಿರ ಬಂದನು. ನಾವೆಯನ್ನು ನೋಡುತ್ತಿರಲು ತಾವು ತುಂಬಿರುವ ದ್ರವ್ಯವೆಲ್ಲಾ ಮಾಯವಾಗಿತ್ತು. ಕೇವಲ ಎಲೆ ಬಳ್ಳಿಗಳಿಂದಲೇ ಆ ನಾವೆಯು ತುಂಬಿದಂತೆ ತೋರಿತು. ದೈವಲೀಲೆಯು ಅಗಾಧವಾದುದು. ಒಮ್ಮೆಲೇ ದ್ರವ್ಯವು ಇಲ್ಲದ್ದನ್ನು ಕಂಡು ಆಶ್ಚರ್ಯದಿಂದಲೂ ಭಯದಿಂದಲೂ ಪೂರ್ಣವಾಗಿ ಸಾಧುವು ಮೂರ್ಛೆಗೊಂಡು ನೆಲಕ್ಕುರುಳಿದನು. ಮುಂದೆ ತುಸು ಹೊತ್ತಿನ ಬಳಿಕ ತಿಳಿದು ಎದ್ದು ಕುಳಿತನು. ಚಿಂತೆಯು ಆತನನ್ನು ಕಾಡತೊಡಗಿತು. ಆ ಸನ್ಯಾಸಿಯು ಶಾಪ ನೀಡಿರುವನು. ಆತನಿಗೆ ನಾವು ಶರಣಾಗತರಾಗಬೇಕು. ಅಳಿಯನ ಯುಕ್ತವಾದದ ಮಾತುಗಳು ಮಾವನಿಗೆ ಸರಿದೋರಿದವು. ಕೂಡಲೇ ಸನ್ಯಾಸಿಯನ್ನು ಹುಡುಕಲು ಹೊರಟನು. ತುಸು ದೂರ ಹೋಗುವಷ್ಟರಲ್ಲಿಯೇ ಅವರು ಅಲ್ಲಿ ಕುಳಿತಿರುವ ಸನ್ಯಾಸಿಯನ್ನು ಕಂಡರು. ಅವನ ಹತ್ತಿರ ಹೋಗಿ ಭಕ್ತಿಭಾವದಿಂದ ನಮಸ್ಕರಿಸಿದರು. ಸಾಧುವೈಶ್ಯನು ತಮ್ಮಿಂದಾದ ಅಪರಾಧಕ್ಕೆ ಸಮ್ಮತಿಸಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದನು. ತಾವು ಆಡಿದ ಮರುತ್ತರವನ್ನು ಕ್ಷಮಿಸಬೇಕಾಗಿ ಪ್ರಾರ್ಥಿಸಿದನು. ಮೇಲಿಂದ ಮೇಲೆ ನಮಸ್ಕರಿಸುತ್ತಾ ತೀವ್ರ ದುಃಖಕ್ಕೆ ಒಳಗಾಗಿ ನಿಂತನು. 

ಇನ್ನು ಸದಾ ಭಕ್ತಿಯಿಂದ ನಿನ್ನನ್ನು ಪೂಜಿಸುವೆ. ನಮ್ಮ ದ್ರವ್ಯವನ್ನು ಮೊದಲಿನಂತೆ ಮಾಡಿಕೊಡು. ಭಕ್ತವತ್ಸಳನಾದ ನೀನು ಶರಣಾಗತನಾದ ನನ್ನನ್ನು ಕಾಪಾಡು. ನಾನು ನಿನಗೆ ಶರಣಾಗತನಾಗಿದ್ದೇನೆ. ಎಂದು ಬೇಡಿಕೊಂಡನು.

ಭಕ್ತಿಭಾವದ ನುಡಿಯನ್ನು ಕೇಳಿ ಶ್ರೀ ಸತ್ಯನಾರಾಯಣನು ಸಂತುಷ್ಟನಾದನು. ಆತನು ಬೇಡಿದ ವರವನ್ನು ಕೊಟ್ಟು ಅಲ್ಲಿಯೇ ಅದೃಶ್ಯನಾದನು. ಶ್ರೀ ಸತ್ಯನಾರಾಯಣನ ಸ್ಮರಣೆಯಲ್ಲಿಯೇ ನಾವೆಯತ್ತ ಹಿಂದಿರುಗಿದರು. ನಾವೆಯ ತುಂಬಾ ದ್ರವ್ಯವು ಕಾಣಿಸಿಕೊಂಡಿತು. ಆಗ ಅವರ ಆನಂದಕ್ಕೆ ನೆಲೆ ಇರಲಿಲ್ಲ. ಶ್ರೀ ಸತ್ಯನಾರಾಯಣನ ಅನುಗ್ರಹದಿಂದಲೇ ತಮ್ಮ ವ್ರತವು ಪೂರ್ನವಾಯಿತೆಂದು ನಿಶ್ಚಿತವಾಗಿ ನಂಬಿದರು. ಕೂಡಲೇ ಸಾಧುವೈಶ್ಯನು ತೀರ ಸಂಭ್ರಮದೊಡನೆ ಸೃಜನರಿಂದ ಕೂಡಿಕೊಂಡು ವಿಧಿಯುಕ್ತರಾಗಿ ಶ್ರೀ ಸತ್ಯನಾರಾಯಣನನ್ನು ಪೂಜಿಸಿದರು. ಕಥೆಯನ್ನು ಶ್ರವಣ ಮಾಡಿ ಈರ್ವರೂ ಪ್ರಸಾದವನ್ನು ಸ್ವೀಕರಿಸಿ ನಾವೆಯ ಹತ್ತಿರ ಬಂದರು. ನಾವೆಯಲ್ಲಿ ಕುಳಿತು ಸಂತೋಷದಿಂದ ತಮ್ಮ ಗ್ರಾಮಕ್ಕೆ ಹೊರಡಲನುವಾದರು.

ನಾವೆಯನ್ನು ಭರದಿಂದ ಸಾಗಿಸಿ ಪಟ್ಟಣದ ಬಳಿಗೆ ಬಂದರು. ಲೀಲಾವತಿಗೂ ಮಗಳಾದ ಕಲಾವತಿಗೂ ತಿಳಿಯಿತು. ತಮ್ಮ ತಮ್ಮ ಪತಿಗಳ ಶುಭ ಆಗಮನದ ವಾರ್ತೆಯನ್ನು ಕೇಳಿ ಶ್ರೀ ಸತ್ಯನಾರಾಯಣನನ್ನು ಅರ್ಚಿಸಿದರು. ವ್ರತವನ್ನು ವಿಧಿಯುಕ್ತವಾಗಿ ಮುಗಿಸಿದರು. ಪತಿಯನ್ನು ಕಾಣುವ ಆತುರದ ಹುಮ್ಮಸ್ಸಿನಲ್ಲಿ ಕಲಾವತಿಯು ಸತ್ಯದೇವನ ಪ್ರಸಾದವನ್ನು ಸ್ವೀಕರಿಸದೇ ಹಾಗೆಯೇ ನಾವೆಯ ಕಡೆಗೆ ಹೋದಳು. ಶ್ರೀ ಸತ್ಯನಾರಾಯಣನು ಅವಳ ಗಂಡನನ್ನೂ ಆತನು ಕುಳಿತಿರುವ ನಾವೆಯನ್ನು ದ್ರವ್ಯಸಹಿತವಾಗಿ ಮುಳುಗಿಸಿಬಿಟ್ಟನು. ಗಂಡನು ಕಾಣದ ಹಾಗಾಗಲು ಕಲಾವತಿಯು ದುಃಖಾವೇಗದಿಂದ ಭೂಮಿಗೆ ಬಿದ್ದಳು. ಮಗಳನ್ನು ಎದೆಗೆ ಅವುಚಿಕೊಂಡಳು. ಕಲಾವತಿಯು ತನ್ನ ಗಂಡನು ಮೃತಪಟ್ಟನೆಂದು ದುಃಖದಿಂದ ಪತಿಯ ಪಾದುಕೆಗಳೊಡನೆ ಸಹಗಮನ ಮಾಡಲು ನಿಶ್ಚಯಿಸಿದಳು. ಇದರಿಂದ ವೈಶ್ಯನಿಗೂ ಆತನ ಹೆಂಡತಿಗೂ ಅಪಾರ ಸಂಕಟ ಉಂಟಾಯಿತು. ಇದೆಲ್ಲವೂ ಆ ಸತ್ಯದೇವನ ಮಾಯೆ ಎಂದೇ ಬಗೆದು ಆ ಸಾಧುವು ಶ್ರೀ ಸತ್ಯದೇವನನ್ನು ಸ್ಮರಿಸುತ್ತಾ ತನ್ನ ಐಶ್ವರ್ಯಾನುಸಾರ ಪೂಜಿಸುವುದಾಗಿ ತೀರ್ಮಾನಿಸಿದನು. ತನ್ನ ಸಂಕಲ್ಪವನ್ನು ತಿಳಿಸಿ ಅಲ್ಲಿಯೇ ಭೂಮಿಯಲ್ಲಿ ಶ್ರೀ ಸತ್ಯನಾರಾಯಣನನ್ನು ಕುರಿತು ಸಾಷ್ಟಾಂಗ ವಂದನೆಗಳನ್ನು ಮಾಡಹತ್ತಿದನು.

ಅದರಿಂದ ದೀನ ರಕ್ಷಕನಾದ ಶ್ರೀ ಸತ್ಯನಾರಾಯಣನು ಸಂತುಷ್ಟನಾದನು ಮತ್ತು ಸಾಧುವನ್ನು ಕುರಿತು 'ಎಲೈ ಸಾಧುವೇ! ನಿನ್ನ ಮಗಳು ಪತಿಯನ್ನು ಕಾಣುವ ಆತುರದಲ್ಲಿ ನನ್ನ ಪ್ರಸಾದವನ್ನು ದುರ್ಲಕ್ಷಿಸಿ ಹಾಗೆಯೇ ಬಂದಿರುವಳು. ಅಂತೆಯೇ ಅವಳ ಗಂಡನು ಕಾಣದಾಗಿರುವನು. ನನ್ನ ಪ್ರಸಾದವನ್ನು ಸ್ವೀಕರಿಸಿದರೆ ಗಂಡನು ಅವಳಿಗೆ ದೊರಕುವನು.' ಎಂದು ಆಕಾಶವಾಣಿಯಿಂದ ತಿಳಿಸಿದನು. 

ಅದರಂತೆಯೇ ಕಲಾವತಿಯು ಪ್ರಸಾದವನ್ನು ತಿಂದು ಬಂದೊಡನೆಯೇ ಎಲ್ಲರೊಡನೆ ನಿಂತ ಪತಿಯನ್ನು ಕಂಡಳು. ವೈಶ್ಯನು ಅಲ್ಲಿಯೇ ಸಿಂಧೂ ನದಿಯ ತೀರದಲ್ಲಿ ವಿಧಿಯುಕ್ತವಾಗಿ ಶ್ರೀ ಸತ್ಯನಾರಾಯಣನನ್ನು ಪೂಜಿಸಿದನು. ಎಲ್ಲಾ ಬಂಧು ಬಾಂಧವರಿಂದ ಕೂಡಿಕೊಂಡು ದ್ರವ್ಯಸಹಿತ ಮನೆಗೆ ಹೋದನು.

ಮುಂದೆ ಸಾಧುವೈಶ್ಯನು ಪ್ರತೀ ಮಾಸದ ಹುಣ್ಣಿಮೆ ಅಮಾವಾಸ್ಯೆ ಮತ್ತು ಸಂಕ್ರಮಣದಲ್ಲಿ ಶ್ರೀ ಸತ್ಯನಾರಾಯಣನ ವ್ರತವನ್ನು ತಪ್ಪದೇ ಆಚರಿಸುತ್ತಾ ಹೋದನು. ಅದರಿಂದ ಆತನ ಅನುಗ್ರಹವನ್ನು ಪಡೆದು ಇಹಲೋಕದಲ್ಲಿ ಮೇಲಾದ ಸುಖವನ್ನು ಅನುಭವಿಸಿದನು. ಕಾಲಕ್ರಮೇಣವಾಗಿ ಕೊನೆಗೆ ಸತ್ಯಪುರ ಮೋಕ್ಷವನ್ನು ಹೊಂದಿದನು.

ಇಂತಿದೆ ಸಾಧುವೈಶ್ಯನ ಕಥೆ. ಇದನ್ನು ನಿಮಗಾಗಿ ಹೇಳಿದೆನು ಎಂದು ಸೂತಪುರಾಣಿಕನು ಹೇಳಿದ ಸ್ಕಂದ ಪುರಾಣದ ರೇವಾಖಂಡದಲ್ಲಿ ಉಕ್ತವಾಗಿರುವ ಶ್ರೀ ಸತ್ಯನಾರಾಯಣ ದೇವರ ೪ನೇ ಅಧ್ಯಾಯದ ಕಥೆಯು ಮುಗಿಯಿತು. 

ಇತೀ ಶ್ರೀ ಸ್ಕಂದ ಪುರಾಣ ರೇವಾ ಖಂಡೇ ಸತ್ಯನಾರಾಯಣ ವ್ರತ ಕಥಾಯಾಂ ಚತುರ್ಥೊಧ್ಯಾಯಂ ಸಮಾಪ್ತಿರಸ್ತು.


೫ನೇ ಅಧ್ಯಾಯ

ಸೂತಪುರಾಣಿಕನು “ಶ್ರೀ ಸತ್ಯದೇವರ ವ್ರತಾಚರನೆಯಿಂದ ದೊರಕುವ ಫಲದ ಮಹತ್ವವು ಹೆಚ್ಚಿನದೆಂಬ ಬಗ್ಗೆ ಇನ್ನೊಂದು ಕಥೆಯನ್ನು ಹೇಳುವೆನು ಕೇಳಿರಿ.' ಎಂದು ಹೇಳಲು ಪ್ರಾರಂಭಿಸಿದನು.

ತುಂಗಧ್ವಜನೆಂಬ ಹೆಸರಿನ ಒಬ್ಬ ಅರಸನಿದ್ದನು, ಆತನು ಪ್ರಜೆಗಳನ್ನು ಮಕ್ಕಳಂತೆ ಪರಿಪಾಲಿಸುತ್ತಿದ್ದನು. ಆದರೆ ಈತನು ಒಮ್ಮೆ ಶ್ರೀ ಸತ್ಯನಾರಾಯಣನ ಪ್ರಸಾದಕ್ಕೆ ಅವಮಾನ ಮಾಡಿದ್ದರಿಂದ ತೀರ ದುಃಖವನ್ನು ಹೊಂದಿದನು. ಅದು ಹೇಗೆಂದರೆ …

ಒಂದು ದಿನ ಈ ರಾಜನು ಮೃಗದ ಬೇಟೆಗೆ ಅರಣ್ಯಕ್ಕೆ ಹೋದನು. ಅಲ್ಲಿ ಎಷ್ಟೋ ಕ್ರೂರ ಮೃಗಗಳನ್ನು ಬೆನ್ನಟ್ಟಿ ಹಲವಾರು ಪ್ರಾಣಿಗಳನ್ನು ಸಂಹರಿಸಿದನು. ವಿಶ್ರಾಂತಿಯನ್ನು ಪಡೆಯಲು ದೊಡ್ಡದಾಗಿ ಬೆಳೆದು ವಿಸ್ತಾರಗೊಂಡ ಆಲದ ಮರವನ್ನು ಕಂಡು ಅದರ ನೆರಳಿಗೆ ಬಂದು ಕುಳಿತನು. ಹಲವು ಗೋಪಾಲಕರು ತಮ್ಮ ಆಕಳು ಹಿಂಡನ್ನು ಮೇಯಿಸಲು ಆ ಅರಣ್ಯಕ್ಕೆ ಬಂದಿದ್ದರು. ಅದೇ ಆಲದ ಮರದ ನೆರಳಿನಲ್ಲಿ ಬರಿದೇ ಕುಳಿತು ಆಡುವರು. ನಿತ್ಯದಂತೆ ಅವರು ಅಡವಿಗೆ ಬಂದು ಒಂದು ದಿನ ಆ ಆಲದಮರದ ಕೆಳಗೆ ಶ್ರೀ ಸತ್ಯನಾರಾಯಣನ ಪೂಜೆಯ ಆಟವನ್ನು ಆಡಿದರು. ಕಲ್ಲು ದುಂಡಿಗೆಗಳೇ ಅವರ ದೇವರು. ಅಲ್ಲಿ ದೊರಕುವ ಪುಷ್ಪಗಳೇ ದೇವರಿಗೆ ಬೇಕಾಗುವ ಹೂವು ಪತ್ರೆಗಳು. ತಾಯಿಯಿಂದ ಕಟ್ಟಿಸಿಕೊಂಡು ಬಂದ ರೊಟ್ತಿಬುತ್ತಿಗಳೇ ದೇವರಿಗೆ ಬೇಕಾಗುವ ಮಹಾ ನೈವೆದ್ಯಗಳು. ಮಹಾಪ್ರಸಾದವು. ಅದರೊಳಗಿದ್ದ ಒಬ್ಬ ವಾಕ್ಚಾತುರ್ಯವುಳ್ಳ ಹುಡುಗನೇ ದೇವರ ಪೂಜೆ ಕಥೆಗಳಿಂದ ಕೂಡಿದ ವ್ರತವನ್ನು ಸಾಂಗಗೊಳಿಸುವ ಬ್ರಾಹ್ಮಣನು. ಈ ಆಲೋಚನೆಯಿಂದ ಅವರು ಸತ್ಯದೇವನ ಪೂಜೆಯ ಪ್ರಕಾರವನ್ನು ಸಾಗಿಸಿದ್ದರು.

ತುಂಗಧ್ವಜ ರಾಜನು ಅದೇ ಮರದ ನೆರಳಿನಲ್ಲಿ ಬಂದು ಒಂದು ಬದಿಗೆ ವಿಶ್ರಮಿಸುತ್ತಿದನಷ್ಟೇ. ಗೋಪಾಲಕರು ಮಾಡುತ್ತಿರುವ ಶ್ರೀ ಸತ್ಯನಾರಾಯಣನ ಪೂಜೆಯನ್ನು ನೋಡುತ್ತಾ ಸ್ವಲ್ಪ ಹೊತ್ತು ಕುಳಿತಿದ್ದನು. ಗೋಪಾಲಕರು ಕರೆದರೂ ಅವರ ಹತ್ತಿರ ಹೋಗಲಿಲ್ಲ. ನಮಸ್ಕರಿಸಲಿಲ್ಲ. ಇಂದೊಂದು ಅಶಿಕ್ಷಿತ ಹುಡುಗರ ಆಟವೆಂದು ಆತನು ತನ್ನ ಮನದಲ್ಲಿ ಹೇಯ ಭಾವನೆಯನ್ನು ಹೊಂದಿದನು. ಗೋಪಾಲಕನು ಶ್ರೀ ಸತ್ಯನಾರಾಯಣನನ್ನು ಪೂಜಿಸಿ ಪ್ರಸಾದವನ್ನು ತಂದರು. ತಂದು ರಾಜನ ಮುಂದೆ ಒಂದು ಎಲೆಯ ಮೇಲಿಟ್ಟು ಹೋದರು. ಕುಳಿತುಕೊಳ್ಳುವ ಎಂಬಂತೆ ಅವರೆಲ್ಲಾಒಂದೆಡೆಗೆ ಸೇರಿ ತಮ್ಮ ತಮ್ಮ ಗಂಟುಗಳನ್ನು ಬಿಚ್ಚಿ ಶ್ರೀ ಸತ್ಯನಾರಾಯಣನ ಪ್ರಸಾದವನ್ನು ಸ್ವೀಕರಿಸಿ ಮನದಣಿಯೆ ಊಟ ಮಾಡಿದರು. ತುಂಗಧ್ವಜರಾಜನು ಅದೊಂದು ಹುಡುಗಾಟಿಕೆಯ ಪ್ರಕಾರವೆಂದು ತಿರಸ್ಕರಿಸಿ ಪ್ರಸಾದವನ್ನು ಅಲ್ಲಿಯೇ ಬಿಟ್ಟು ಹೊರಟುಹೋದನು. ಮುಂದೆ ತುಸು ದಿನಗಳಲ್ಲಿಯೇ ಅವನು ಪ್ರಸಾದವನ್ನು ತ್ಯಜಿಸಿದ ಕರ್ಮಫಲವನ್ನು ಅನುಭವಿಸಬೇಕಾಗಿ ಬಂದಿತು.

ರಾಜ್ಯವನ್ನೆಲ್ಲಾ ಕಳೆದುಕೊಂಡನು. ಆತನ ನೂರು ಜನ ಮಕ್ಕಳು ನಾಶ ಹೊಂದಿದರು. ಆತನು ಧನ ಧಾನ್ಯವನ್ನೆಲ್ಲಾ ಕಳೆದುಕೊಂಡು ಸಂಪತ್ತೆಲ್ಲವೂ ನಾಶವಾಯ್ತು. ಹೀಗಾಗಿ ಅವನು ಬಹಳ ಸಂಕಷ್ಟಕ್ಕೆ ಒಳಗಾದನು. ಬಹಳ ಹೀನಾವಸ್ಥೆಯನ್ನು ಹೊಂದಿದನು. ಆಗ ಶ್ರೀ ಸತ್ಯದೇವನ ಪೂಜೆಯನ್ನು ಪ್ರಸಾದವನ್ನು ಹೀಗಳಿಸಿ ಅವಮಾನಿಸಿದ್ದರಿಂದಲೇ ತನಗೆ ಈ ಗತಿ ಉಂಟಾಯಿತೆಂದು ಆತನು ಕಂಡುಹಿಡಿದನು. ಆದ್ದರಿಂದ ಯಾವ ಸ್ಥಳದಲ್ಲಿ ಶ್ರೀ ಸತ್ಯದೇವನಿಗೆ ಅವಮರ್ಯಾದೆ ಮಾಡಿದ್ದನೋ ಅದೇ ಸ್ಥಳಕ್ಕೆ ಹೋಗಬೇಕೆಂದು ನಿಶ್ಚಯಿಸಿದನು. ಅಲ್ಲಿಯೇ ಶ್ರೀ ಸತ್ಯನಾರಾಯಣನನ್ನು ಪೂಜಿಸಿ ಅವನ ಕೃಪಾಕಟಾಕ್ಷ ಪಡೆಯಬೇಕೆಂದು ಮನಮುಟ್ಟಿ ಗೊತ್ತು ಮಾಡಿದನು.

ಅದೇ ಆಲದ ಮರದ ಕೆಳಗೆ ಹೋದನು. ಪೂಜೆ ಪ್ರಸಾದಗಳಿಗೆ ಬೇಕಾದ ಸಾಮಗ್ರಿಗಳನ್ನು ಸಂಗಡ ಒಯ್ದನು. ಅಲ್ಲಿ ಆ ಗೋಪಾಲಕರ ಗುಂಪಿನಲ್ಲಿ ತಾನೂ ಸೇರಿಕೊಂಡು ಗೋಪಾಲಕರೊಡನೆ ಭಕ್ತಿಭಾವದಿಂದ ವಿಧಾನ ಪೂರ್ವಕವಾಗಿ ಶ್ರೀ ಸತ್ಯನಾರಾಯಣನ ವ್ರತವನ್ನು ಮಾಡಿದನು. ಸತ್ಯದೇವನ ಪ್ರಸಾದದಿಂದಲೂ ಆ ರಾಜನು ರಾಜೈಶ್ವರ್ಯಗಳಿಂದಲೂ ಮಕ್ಕಳಿಂದಲೂ ಕೂಡಿ ಇಹಲೋಕದಲ್ಲಿ ಸುಖದಿಂದ ಇದ್ದು ಅನಂತರ ಸತ್ಯಪುರಕ್ಕೆ ಹೋದನು. ಮೋಕ್ಷವನ್ನು ಹೊಂದಿದನು.


Conclusion: 

ಋಷಿಗಳೇ! ಇಂತಹ ಪರಮದುರ್ಲಭಾನಾದ ಶ್ರೀ ಸತ್ಯನಾರಾಯಣ ವ್ರತವನ್ನು ಭಕ್ತಿಪೂರ್ವಕವಾಗಿ ಮಾಡುವವರು ಎಲ್ಲ ಫಲಗಳನ್ನು ಸಮೃದ್ಧಿಯಾಗಿ ಹೊಂದುವರು. ಶ್ರೀ ಸತ್ಯನಾರಾಯಣನ ಅನುಗ್ರಹಕ್ಕೆ ಒಳಗಾದವರು ಧನಧಾನ್ಯಾದಿಗಳಿಂದ ಸಮೃದ್ಧರಾಗುವರು. ದರಿದ್ರನು ವ್ರತವನ್ನು ಮಾಡಲಿ ಐಶ್ವರ್ಯದಿಂದ ಪೂರ್ಣನಾಗುವನು. ಕಾರಾಗ್ರಹದಲ್ಲಿರುವವನು ಬಂಧಮುಕ್ತನಾಗುವನು. ಇದರಲ್ಲಿ ಸಂಶಯವಿಲ್ಲ. 

ಈ ವ್ರತವನ್ನು ಮಾಡಿದ ಮಾತ್ರದಿಂದ ಮನುಷ್ಯನು ಎಲ್ಲ ದುಖಗಳಿಂದ ಮುಕ್ತನಾಗುವನೋ ಅಂತಹ ಈ ಸತ್ಯನಾರಾಯಣನ ಪೂಜೆಯು ಫಲವನ್ನು ಕೊಡುತ್ತದೆ. ವ್ರತವನ್ನು ಮಾಡುವುದರಿಂದ ದುಃಖಗಳೆಲ್ಲಾ ನಾಶವಾಗಿ ಸುಖ ಹೊಂದುವರು. ಈತನಿಗೆ ಕೆಲವರು ಸತ್ಯನಾರಾಯಣ ಎಂತಲೂ ಸತ್ಯದೇವ ಅಂತಲೂ ಕರೆಯುವರು. ಮನೋರಥವನ್ನು ಪೂರ್ಣ ಮಾಡಿ ಕೊಡುವ ಭಗವಂತನು ಈ ಕಲಿಗಾಲದಲ್ಲಿ ಸತ್ಯವ್ರತ ಎಂಬ ನಾಮದಲ್ಲಿ ಅವತರಿಸಿದ್ದಾನೆ. ಈ ಸತ್ಯನಾರಾಯಣನ ಕಥೆಯನ್ನು ನಿತ್ಯದಲ್ಲೂ ಯಾರು ಪಠಿಸುವರೊ ಮತ್ತು ಯಾರು ಶ್ರವಣ ಮಾಡುವರೋ ಅವರ ಪಾಪ ದುಃಖಗಳೆಲ್ಲಾ ಶ್ರೀ ಸತ್ಯನಾರಾಯಣನ ಅನುಗ್ರಹದಿಂದ ನಿಶ್ಚಯವಾಗಿ ನಾಶ ಹೊಂದುವುದು. ಇಂತಿದೆ ಶ್ರೀ ಸತ್ಯನಾರಾಯಣನ ದೇವರ ವ್ರತವು. 

ಶ್ರೀ ಸತ್ಯನಾರಾಯಣ ದೇವನ ಕಥೆಯ ಪಂಚಮೊಧ್ಯಾಯ ಸಮಾಪ್ತಿರಸ್ತು.