ಶ್ರೀ ಕೃಷ್ಣ ಪ್ರಭುವು, ಸೇವಕನು ನಾನು!
ಲೋಕವನು ಬೆಳಗಿಸುವ, ನಮ್ಮಪ್ಪ ಭಾನು!
ವರಗಳನು ನೀಡುವನು, ಕಷ್ಟಗಳ ನೀಗುವನು,
ತಂದೆ ನೀನೆಂದೊಡೆ, ಕರುಣೆಯಲಿ ಕರಗುವನು!
ಕಾರಣಕೆ ಕಾರಣನು ಲೋಕಕೇ ರಕ್ಷಕನು,
ರುಕ್ಮಿಣೀ ವಲ್ಲಭನು, ಕಲಕ್ಕೂ ಭಕ್ಷಕನು!
ಭಾಸ್ಕರನು, ಅರ್ಯಮನು, ದಿವಕರನು ಶಿವನು,
ಸ್ಥಿತಿ-ಸೃಷ್ಟಿ-ಲಯ ಕರ್ತ ಎಲ್ಲವೂ ಇವನು!
ಇವ ಮಿತ್ರ, ಇವ ಸತ್ರ, ಸರ್ವತ್ರನಿವನು,
ಇವ ಅಸ್ತ್ರ, ಇವ ಶಸ್ತ್ರ, ಇಡಿ ಶಾಸ್ತ್ರನಿವನು!
ಇವ ಒಂದೆ, ಇವ ತಂದೆ, ಲೋಕಕೇ ಹಿತನು,
ಇವ ಬಿಂದು, ಇವ ಬಂಧು, ಮಿತನು ಇವ ಅಮಿತನು!
ಪಾಂಡವರ ದ್ರೌಪದಿಯ ಕಷ್ಟದಲಿ ಕಾದವನು
ಕುಂತಿಗೆ ಒಲಿದವನು, ಕಂಸನಾ ಕೊಂದವನು!
ಕೆಡುಕರಿಗೆ ಕೆಟ್ಟವನು, ಗೀತೆಯನು ಕೋಟ್ಟವನು,
ಬ್ರಹ್ಮಾದಿತಿ ಸುತರ ದರ್ಪವನು ಸುಟ್ಟವನು!
ಸಾಕ್ಷಿಯಾ ರೂಪದಲಿ ಎಲ್ಲವನು ಬಲ್ಲವನು,
ನಡೆದವಗೆ ನಡೆಯುವನು, ನಿಂತವಗೆ ನಿಲ್ಲುವನು!
ಬಿಲ್ಲನೂ ಹಿಡಿಯುವನು, ರಾಕ್ಷಸರ ಕೊಲ್ಲುವನು,
ಎಲ್ಲವನು ಸೆಳೆಯುವನು, ಬೆಳಕಲ್ಲೂ ಹೊಳೆಯುವನು!
ಪಾರ್ಥನಿಗೆ ಸಾರತಿಯು, ಸರ್ವಜ್ಙನಿವನು!
ಸ್ತುತಿ ತಂತ್ರ ಮಂತ್ರಗಳ ಪ್ರಣವನೂ ಇವನು!
ಎಲ್ಲರನು ಪೋಷಿಸುವ ಹರಿಯು ಇವ ಹರನು!
ಗತಿ ಯಂತ್ರ, ಕಾಲಗಳ ಸೂತ್ರನಿವ ಯಮನು!
ಕೇಶವನು, ಮಾಧವನು, ಶ್ರೀಧರನು, ಭವನು!
ನರನು ಇವ, ಸ್ಮರನು ಇವ, ಇವನು ವಾಮನನು!
ನರಹರಿಯು, ಕೇಸರನು, ಜಾರಕನು, ಅಜರನು!
ಇವ ಶಕ್ತಿ, ಇವ ಭಕ್ತಿ, ಧರನು ದಾಮೋದರನು!
ಶ್ರೀ ಕೃಷ್ಣನಿವನು! ಶ್ರೀ ಕೃಷ್ಣನಿವನು!
ಶ್ರೀ ಕೃಷ್ಣನಿವನು! ಶ್ರೀ ಕೃಷ್ಣನಿವನು!
Comments
Post a Comment