ಈ ಅದ್ಭುತವಾದ ಹಾಡು ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದ ಮನರಂಜಿಸುವ ಜೊತೆಗೆ ಅರ್ಥವಾಗಿದೆಯೋ ಇಲ್ಲವೋ ಅನ್ನುವ ಸ್ಥಿತಿಯಲ್ಲಿ ಬಿಟ್ಟಿದೆ. ಕೆಲವು ಪದಗಳಂತೂ ನನಗೆ ನಿಜವಾಗ್ಲೂ ಕನ್ನಡ ಬರುತ್ತದೆಯೇ ಎನ್ನುವ ಹಾಗೆ ಮಾಡಿವೆ. ಅದಕ್ಕಾಗಿಯೇ ನಾನು ನನ್ನ ಲಾಭಕ್ಕಾಗಿ ಇದನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ. ನನ್ನ ಶಕ್ತಿಮಟ್ಟಿಗೆ ಸಾಧ್ಯವಾದಷ್ಟು ಅನುವಾದಿಸಲು ಪ್ರಯತ್ನಿಸಿದ್ದೇನೆ. ದಯವಿಟ್ಟು ತಪ್ಪಿದ್ದಲ್ಲಿ ಕ್ಷಮಿಸಿ, ಸರಿಯಾದದ್ದನ್ನು ತಿಳಿಸಿ.
ಕನಕದಾಸರವರ ಸುಂದರವಾದ ಪ್ರಶ್ನೋತ್ತರ ಸಂಕಲನ :) ಒಂದು ವಿಚಿತ್ರವಾದ ಗಣೇಶ ವಂದನೆ :-) ಎಷ್ಟೊ ದಿನ ಇದು ಶಾರದೆಯನ್ನು ಕುರಿತು ಬರೆದ ಹಾಡು ಎಂದು ತಿಳಿದಿದ್ದೆ :-) ಶಾರದೆ ಎಂದರೆ ಒಂದು ಅರ್ಥದಲ್ಲಿ ಭಾದ್ರಪದ ಮಾಸದ ಸಂಕೇತ ಎಂದೂ ಇದೆ ಎಂದು ಎಲ್ಲೋ ಕೇಳಿದ್ದು ನೆನಪು. ಶಾರದೆ ವಿದ್ಯಾ ದೇವತೆ. ಗಣೇಶ ವಿದ್ಯೆಯ ಪುತ್ರ.
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮ
-- ಓ ತಾಯಿ ಶಾರದೆಯೇ, ಉಮಾ ಮಹೇಶ್ವರಿಯೇ, ನಿಮ್ಮೊಳಗೆ (ನಿಮ್ಮ ಅಂತರಂಗದಲ್ಲಿ, ಮನಸಿನಲ್ಲಿ, ಹೃದಯದಲ್ಲಿ) ನೆಲೆಸಿರುವ ಇವನು ಯಾರಮ್ಮ?
ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ ಕಾಣಮ್ಮ
ಕಮ್ಮಗೋಲನ (ಕಾಮದೇವರ) ವೈರಿಯ (ಶಿವನ; ಕಾಮನನ್ನು ಸುಟ್ಟವನ) ಮಗನಾದ ಈ ಸೊಂಡಿಲನ್ನು ಹೆಮ್ಮೆಯಿಂದ ಆಡಿಸುತ್ತಿರುವ (ನಿನ್ನೊಳಗೇಿ ಇರುವ) ಈ ಗಣಗಳಿಗೆ ನಾಯಕನಾದವನನ್ನ ನೀನು ಕಂಡೆಯಾ ತಾಯಿ?
ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮ
ಇವನ ಮುಖವೋ ಕಪ್ಪು, ಕಿವಿಯೋ ಮೊರದ ಹಾಗೆ ಅಗಲವಾದದ್ದು, ಹಲ್ಲೋ ಕೋರೆಹಲ್ಲು, ಯಾರಮ್ಮಾ ಇವನು? (ಇವೆಲ್ಲವೂ ಕುರೂಪದ ಸಂಕೇತ ಆದರೆ ಗಣೆಶ ಸುಂದರ, ಎಲ್ಲರಿಗೂ ಪ್ರಿಯವಾದವನು. ಶಾರದೆಗೋ ಅತಿ ಪ್ರಿಯ)
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ ಕಾಣಮ್ಮ
ಈ ಮೂರುಕಣ್ಣಿನವನ (ಶಿವನ) ಮಗ, ಅರ್ಧ ಚಂದ್ರನನ್ನು (ಚಂದ್ರನ ಗರ್ವವನ್ನು ಮುರಿದವನು ಗಣೇಶ) ಧರಿಸಿರುವ ಈ ಧೀರ ಗಣನಾಥನೇ ನಿನ್ನೊಳಗೆ ಇರೋದು ತಾನೆ? (ಧೀರ ಎಂದರೆ ಇಲ್ಲಿ ಒಳ್ಳೆಯ ಕುಲದವನು, ಬುದ್ಧಿವಂತನು ಎಂದು ಆಗುತ್ತದೆ)
ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾನಿವನಾರಮ್ಮ
(ಉಟ್ಟ ದಟ್ಟಿಯು) ಪಂಚೆಯನು ಕಚ್ಚೆಯಂತೆ ಬಿಗಿದು ಉಟ್ಟಿರುವ, ಈ ಧೈರ್ಯವಂತ (ಅಳ್ಳಾಡಿಸಲು ಆಗದವ) ಇವನು ಯಾರಮ್ಮಾ?
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ ಕಾಣಮ್ಮ
(ಈ ಲೋಕಕ್ಕೆಲ್ಲಾ ತಾಯಿಯೆಂದು ಎನಿಸಿ) ಪಟ್ಟದರಾಣಿಯಾದ ಪಾರ್ವತಿಯ ಕುಮಾರನಲ್ಲವೇ ಇವನು, ಈ ಹೊಟ್ಟೆಯ ಗಣನಾಥ, ನೋದಮ್ಮ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ
ಎಲ್ಲಾ ತರಹದ ವಿದ್ಯೆಗಳನ್ನೂ ತಿಳಿದಿರುವ, ತಾಯಿ ಪಾರ್ವತಿಯ ಹಂಬಲಗಳನ್ನು ಅರಿತಿರುವ, ಈ ವಾಗ್ಮಿ ಯಾರಮ್ಮ?
ಲೇಸಾಗಿ ಜನರ ಸಲಹುವ ನೆಲೆ ಆದಿಕೇಶವನ ದಾಸ ಕಣೇ ಅಮ್ಮಯ್ಯ
ಉತ್ತಮವಾಗಿ ಎಲ್ಲರನೂ ನೋಡಿಕೊಳ್ಳುವ/ಕಾಪಾಡುವ ಇವನು ಎಲ್ಲರಿಗೂ ಆಶ್ರವಯವನ್ನು ಕೊಡುವ ಆದಿಕೇಶವನ ದಾಸಾ ಕಾಣೆ ತಾಯಿ ಇವನು.
-------
ಕನಕದಾಸರ ಕೃತಿಗಳಲ್ಲಿ ಅರ್ಥ ನೆಟ್ಟಗೆ ಇರೋದಿಲ್ಲ ಕೆಲವೊಮ್ಮೆ. ಈ ಕೃತಿಯಲ್ಲೂ ಅಷ್ಟೆ. ಪಾರ್ವತೀ ದೇವಿಯೊಡನೆ ಸಂಭಾಷಣೆ ಏಕೆ? ತಾಯಿಯಿಂದ ಮಗನ ಆರಾಧನೆ. ಯಾರಿಗೂ ಸಿಗದವ ತಾಯಿಗೆ ಸಿಕ್ಕಾನು ಎಂದು. ಗಣೇಶ ಎಲ್ಲಿದ್ದಾನೆ ಎಂದರೆ, ಶಾರದೆಯ ಅಂತರಂಗಳದ ಆಳದಲ್ಲಿದ್ದಾನೆ ಎಂದು. ಶಾದರೆ, ಉಮಾ ಮಹೇಶ್ವರಿ, ಲೋಕಮಾತೆ. ಅವಳಿಗೆ ಗಣೇಶನ ಮೇಲೆ ಹೆಮ್ಮೆ, ಪ್ರೀತಿ. ಅವಳಿಗೆ ಗಂಡನಾದ ಶಿವನ ಮೇಲೆ ಅದಕ್ಕೂ ಹೆಚ್ಚು ಹೆಮ್ಮೆ ಪ್ರೀತಿ. ಅವಳನ್ನ ಒಲಿಸಲು ಮಗನ ಜೊತೆ ಗಂಡನನ್ನೂ ಹೊಗಳುತ್ತಾರೆ ದಾಸರು. ಕಾಮವನ್ನು ನಾಶಮಾಡಿದ ಶಿವನಿಂದ ಬಂದವ ಗಣೇಶ ನಮ್ಮಲ್ಲಿನ ಕೆಟ್ಟ ಕಾಮವನ್ನು ಸುಡಬಲ್ಲನು.
ಶುಂಡವೆಂದರೆ ಸಂಸ್ಕೃತದಲ್ಲಿ ಸೊಂಡಿಲು ಎಂದು. ಸೊಂಡಿಲೇ ಅವನ ಬಾಯಿ, ಮೂಗು, ಕಾಲು ಹಾಗು ಕೈ. ತಾನು ಶಿವನ ಮಗ ಎಂದು ಹೆಮ್ಮೆಯಿಂದ ಓಡಾಡುವ ಎಂದಾಗ ಆ ತಾಯಿಗೆ ಆನಂದ. ಮಕ್ಕಳು ಹೇಗೆ ಇರಲಿ ತಾಯಿಗೆ ಪ್ರೀತಿ - ಕಪ್ಪಗಿರಲಿ, ಅಗಲವಾದ ಕಿವಿ ಇರಲಿ, ದಪ್ಪ ಹೊಟ್ಟೆಯಿರಲಿ, ಕೋರೆ ಹಲ್ಲಿರಲೀ, ಹೇಗಿದ್ದರೂ ತಾಯಿಗೆ ಪ್ರೀತಿ. ಅದರ ಜೊತೆಗೆ ಈ ಗಣೇಶ ಸಾಮಾನ್ಯವಾದವನಲ್ಲ, ಚಂದ್ರನ ಗರ್ವವನ್ನು ಭಂಗ ಮಾಡಿ ಧೀರನಂತಿರುವ, ಪಂಚೆಯನ್ನ ಉಟ್ಟು (ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್...) ಗಣನಾಥ ಅವನು, ವಾಗ್ಮಿಯು ಅವನು. ಇಂತಹಾ ಗಣೇಶನು ಶ್ರೀ ಕೃಷ್ಣನ ದಾಸನು ಕಣೆ ತಾಯಿ, ಅವನಿಗೆ ನಾನು ವಂದಿಸುತ್ತೇನೆ. ಈ ಗಣೇಶನನ್ನು ಆದಿಯಲ್ಲಿ ವಂದಿಸಬೇಕೆಂದು ಹರಿಯ ಆಜ್ಙೆಯುಂಟು.
Comments
Post a Comment